ಉಡುಪಿ, ಸೆ. 18: ಅಮೃತ್ ಸಮ್ಮಾನ್ ಪ್ರಶಸ್ತಿ ಪುರಸ್ಕೃತ ಮನೋಜ್ ಕಡಬ ನೇತೃತ್ವದಲ್ಲಿ ಉಡುಪಿಯ ಶೆಫಿನ್ಸ್ ಎಜ್ಯುಕೇಶನಲ್ ಅಂಡ್ ಚಾರಿಟೆಬಲ್ ಟ್ರಸ್ಟ್ ನಡೆಸುತ್ತಿರುವ ‘ಸ್ಪೋಕನ್ ಇಂಗ್ಲಿಷ್ ಕಲಿಸುವ ಮೂಲಕ ಕನ್ನಡ ಮಾಧ್ಯಮ ಶಾಲೆ ಉಳಿಸಿ ಆಂದೋಲನ’ ದ ಮೊದಲ ಹೆಜ್ಜೆಯಾದ ಅತಿಥಿ ಹಾಗೂ ಗೌರವ ಶಿಕ್ಷಕರ 4 ದಿನಗಳ ನೇರ ತರಬೇತಿಯ ಮೂರನೇ ಬ್ಯಾಚ್ ನ್ನು ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಶೆಟ್ಟಿ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿ ಅಶೋಕ್ ನಾಯಕ್ ಇವರುಗಳ ವಿಶೇಷ ಕಾಳಜಿಯಂತೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯೆಡಾಡಿ-ಮತ್ಯಾಡಿಯ ಆಶ್ರಯದಲ್ಲಿ ಸೆಪ್ಟಂಬರ್ 14ರಿಂದ 17ರ ವರೆಗೆ ಹಮ್ಮಿಕೊಳ್ಳಲಾಯಿತು. ತರಬೇತಿಯಲ್ಲಿ ಹುಣ್ಸೆಮಕ್ಕಿ, ಕೆದೂರು ಮತ್ತು ಬಿದ್ಕಲ್ ಕಟ್ಟೆ ಕ್ಲಸ್ಟರ್ ಗಳ ಒಟ್ಟು 8 ಶಾಲೆಗಳ 20 ಜನ ಅತಿಥಿ ಹಾಗೂ ಗೌರವ ಶಿಕ್ಷಕರು ಭಾಗವಹಿಸಿದರು.
ತರಬೇತಿಯಲ್ಲಿ ಆಂಗ್ಲ ವ್ಯಾಕರಣ, ಆಂಗ್ಲ ಭಾಷಾ ಸಂವಹನ, ಪರಿಣಾಮಕಾರಿ ಸಂವಹನ, ಮಕ್ಕಳಿಗೆ ಸ್ಪೋಕನ್ ಇಂಗ್ಲಿಷ್ ಕಲಿಸುವ ವಿಧಾನ, ಟಂಗ್ ಟ್ವಿಸ್ಟರ್ ಗಳ ರಚನೆ, ಕಥಾ ರಚನೆ, ಆಂಗ್ಲ ಭಾಷೆ ಓದುವ ವಿಧಾನ, ಬರವಣಿಗೆಯ ವಿಧಾನ, ಆಲಿಸುವ ವಿಧಾನ, ಆತ್ಮವಿಶ್ವಾಸ ಹೆಚ್ಚಿಸುವಿಕೆ ಮುಂತಾದ ವಿಚಾರಗಳ ಬಗ್ಗೆ ಚಟುವಟಿಕೆ ಆಧಾರಿತ ತರಬೇತಿ ನೀಡಲಾಯಿತು. ತರಬೇತಿಯಲ್ಲಿ ಜಪ್ತಿ ಅನುದಾನಿತ ಶಾಲೆಯ ಅತಿಥಿ ಶಿಕ್ಷಕ ಉದಯ ಕೊಠಾರಿ ಇವರಿಗೆ ಕ್ರಿಯಾಶೀಲ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಉದ್ಘಾಟನಾ ಸಮಾರಂಭದಲ್ಲಿ ಸಿ.ಆರ್.ಪಿ ವಸಂತ ಶೆಟ್ಟಿ, ಅತಿಥೇಯ ಶಾಲೆಯ ಮುಖ್ಯೋಪಾಧ್ಯಾಯಿನಿ ರಮಣಿ, ಹಾಗೂ ಶಾಲಾಭಿವೃದ್ಧಿ ಮಂಡಳಿ ಅಧ್ಯಕ್ಷ ಮಂಜುನಾಥ ಮೊಗವೀರ ಅತಿಥಿಗಳಾಗಿ ಭಾಗವಹಿಸಿದ್ದರು. ಸಾಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಬಿ. ಆರ್. ಪಿ. ಸುಕನ್ಯಾ ವಹಿಸಿದ್ದು, ಅತಿಥಿಗಳಾಗಿ ಅತಿಥೇಯ ಶಾಲೆಯ ಮುಖ್ಯೋಪಾಧ್ಯಾಯಿನಿ ರಮಣಿ, ಹಾಗೂ ಶಾಲಾಭಿವೃದ್ಧಿ ಮಂಡಳಿ ಅಧ್ಯಕ್ಷ ಮಂಜುನಾಥ ಮೊಗವೀರ ಭಾಗವಹಿಸಿದ್ದರು. ಶೆಫಿನ್ಸ್ ಸಂಸ್ಥೆಯ ನಿರ್ದೇಶಕ ಮನೋಜ್ ಕಡಬ, ತರಬೇತುದಾರರಾದ ಸ್ಮಿತಾ ಕೆ.ಸಿ., ಸಂಯೋಜಕಿ ಅರ್ಪಿತಾ ಬ್ರಹ್ಮಾವರ ಮತ್ತು ಇಜಾಜ್ ಮನ್ನ ಉಪಸ್ಥಿತರಿದ್ದರು. ಶಿಬಿರಾರ್ಥಿಗಳಾದ ನಾಗರತ್ನ ಸ್ವಾಗತಿಸಿ, ಶೋಭಿತಾ ವಂದಿಸಿದರು. ಮಹಾಲಕ್ಷ್ಮಿ ಐತಾಳ್ ಕಾರ್ಯಕ್ರಮ ನಿರೂಪಿಸಿದರು.