ಮಂಗಳೂರು, ಸೆ. 18: ಕೆನರಾ ಹೈಸ್ಕೂಲ್ ಅಸೋಸಿಯೇಶನ್ ಪ್ರಾಯೋಜಿತ ಬೆಂಜನಪದವು ಕೆನರಾ ಇಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ನೂತನ ಡಾ.ಪಿ.ದಯಾನಂದ ಪೈ -ಪಿ. ಸತೀಶ್ ಪೈ ಅಡಿಟೋರಿಯಂಗೆ ಭೂಮಿ ಪೂಜೆ ಸೋಮವಾರ ನಡೆಯಿತು. ಕೆನರಾ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಯೂ, ಮಹಾದಾನಿಯೂ ಆಗಿರುವ ಡಾ. ಪಿ.ದಯಾನಂದ ಪೈ ಜತೆಗೆ ಪತ್ನಿ ಮೋಹಿನಿ ಡಿ.ಪೈ, ಸಹೋದರ ಪಿ ಸತೀಶ್ ಪೈ, ಪಿ ಸಬಿತಾ ಪೈ ಉಪಸ್ಥಿತಿಯಲ್ಲಿ ನೂತನ ಆಡಿಟೋರಿಯಂಗೆ ಭೂಲಕ್ಷ್ಮೀ ಪೂಜೆ ನಡೆಯಿತು. ಆಡಳಿತ ಮಂಡಳಿ ಉಪಾಧ್ಯಕ್ಷ ಎಂ. ಪದ್ಮನಾಭ ಪೈ, ಕಾರ್ಯದರ್ಶಿ ಎಂ. ರಂಗನಾಥ ಭಟ್, ಕಾಲೇಜಿನ ಗವರ್ನಿಂಗ್ ಕೌನ್ಸಿಲ್ ಸಂಚಾಲಕ ಪ್ರದೀಪ್ ಜಿ.ಪೈ ಮತ್ತಿತರ ಗಣ್ಯರು ಸಮಾರಂಭದಲ್ಲಿ ಪಾಲ್ಗೊಂಡರು.
ಕೆನರಾ ಶಿಕ್ಷಣ ಸಂಸ್ಥೆಗಳ ಪ್ರಗತಿ ಮತ್ತು ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡುತ್ತಾ ಬಂದಿರುವ ಕೆನರಾ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಯೂ ಆಗಿರುವ ಡಾ. ಪಿ. ದಯಾನಂದ ಪೈ ತನ್ನ ಹಾಗೂ ಸಹೋದರ ಪಿ. ಸತೀಶ್ ಪೈ ಹೆಸರಲ್ಲಿ ಸುವಿಶಾಲ ಅಡಿಟೋರಿಯಂ ಕೊಡುಗೆ ನೀಡುತ್ತಿರುವುದು ವಿಶೇಷತೆ. 6.5 ಕೋಟಿ ರೂ ವೆಚ್ಚದಲ್ಲಿ ಸುಸಜ್ಜಿತ ಸಭಾಂಗಣ, ವೇದಿಕೆ, ಸೌಂಡ್ಸ್, ಲೈಟಿಂಗ್ ಆಸನ ವ್ಯವಸ್ಥೆ, ಪಾರ್ಕಿಂಗ್ ಹೀಗೆ ಎಲ್ಲ ಸೌಲಭ್ಯಗಳನ್ನೂ ನೂತನ ಆಡಿಟೋರಿಯಂ ಒಳಗೊಂಡಿದೆ. ಕೆನರಾ ಶಿಕ್ಷಣ ಸಂಸ್ಥೆಗಳ ಬೆಳವಣಿಗೆಯಲ್ಲಿ ತನ್ನ ಅಮೂಲ್ಯ ಸಲಹೆ, ಮಾರ್ಗದರ್ಶನ, ಎಲ್ಲ ಅಭಿವೃದ್ಧಿ ಕಾರ್ಯಗಳಲ್ಲೂ ಮಹತ್ವದ ಕೊಡುಗೆ, ಅಮೂಲ್ಯ ದೇಣಿಗೆ ನೀಡುತ್ತಿರುವ ಡಾ.ಪಿ.ದಯಾನಂದ ಪೈ ಕೆನರಾ ಸಿಬಿಎಸ್ಸಿ ಶಾಲಾ ಕಟ್ಟಡ, ನವೀಕೃತ ಇಂಗ್ಲೀಷ್ ಪ್ರೈಮರಿ ಶಾಲಾ ಕಟ್ಟಡ, ಶ್ರೀ ಭುವನೇಂದ್ರ ಸಭಾಭವನದ ನವೀಕರಣ ಕಾರ್ಯದಲ್ಲಿ ಮಹತ್ವದ ದೇಣಿಗೆ ನೀಡಿದ್ದಾರೆ. ಡಾ.ಪೈ ಅವರ ಚಿಂತನೆಯ ಶಿಕ್ಷಕರ ಕ್ಷೇಮಾಭಿವೃದ್ಧಿ ನಿಧಿಯ ಮೂಲಕ ಕೆನರಾ ಶಿಕ್ಷಕರ ಮಕ್ಕಳಿಗೆ ಅತೀ ಕಡಿಮೆ ಶುಲ್ಕದಲ್ಲಿ ಕೆನರಾ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣ ನೀಡಲಾಗುತ್ತಿದೆ.