ಮಂಗಳೂರು, ಸೆ. 18: ಮಂಗಳೂರು ವಿಶ್ವವಿದ್ಯಾನಿಲಯದ ಗಣೇಶೋತ್ಸವ ವಿಚಾರಕ್ಕೆ ಸಂಬಂಧಿಸಿದಂತೆ ಈ ಹಿಂದಿನಂತೆ ಗಣೇಶೋತ್ಸವ ಮುಂದುವರಿಸಿಕೊಂಡು ಹೋಗುವಂತೆ ಬಂದಿರುವ ಆದೇಶವು ಇಷ್ಟು ದಿನ ವಿವಾದ ಸೃಷ್ಟಿಸಿ ಜನರ ದಿಕ್ಕು ತಪ್ಪಿಸಲು ಯತ್ನಿಸಿದ್ಧವರಿಗೆ ಸ್ಪಷ್ಟ ಸಂದೇಶವಾಗಿದೆ ಎಂದು ಶಾಸಕ ವೇದವ್ಯಾಸ್ ಕಾಮತ್ ಹೇಳಿದರು. ಯಾವುದೇ ಗೊಂದಲಕ್ಕೂ ಆಸ್ಪದ ನೀಡದೇ ಈ ಹಿಂದಿನಂತೆ ಗಣೇಶೋತ್ಸವ ನಡೆಸುವ ಬಗ್ಗೆ ಬಂದಿರುವ ಆದೇಶವು ಇಡೀ ಹಿಂದೂ ಸಮಾಜದ ಹೋರಾಟಕ್ಕೆ ಸಿಕ್ಕಿರುವ ಗೆಲುವಾಗಿದೆ. ಕಾಂಗ್ರೆಸ್ ಸರ್ಕಾರ ಸದಾ ಹಿಂದೂ ಧರ್ಮದ ಆಚರಣೆಗಳಿಗೆ ಮಾತ್ರ ನಿರ್ಬಂಧಗಳನ್ನು ಹೇರುವ ಮೂಲಕ ಗೊಂದಲ ಸೃಷ್ಟಿಸುವ ಕೆಲಸವನ್ನು ಹಿಂದೆಯೂ ಮಾಡಿತ್ತು, ಈಗಲೂ ಅದನ್ನೇ ಮುಂದುವರಿಸುತ್ತಿದೆ.
ಕೆಲವರು ವೇದವ್ಯಾಸ್ ಕಾಮತ್ ಅವರು ಹೊರಗಿನಿಂದ ಬಂದು ಈ ಸಮಸ್ಯೆಯನ್ನು ಸೃಷ್ಟಿಸಿದರು ಎಂದು ಹೇಳುತ್ತಿದ್ದಾರೆ, ಆದರೆ ಆರಂಭದಲ್ಲಿಯೇ ಈ ಹಿಂದಿನಂತೆ ಗಣೇಶೋತ್ಸವ ಮುಂದುವರಿಸಿಕೊಂಡು ಹೋಗಿದ್ದರೆ ನಾನೂ ಸೇರಿದಂತೆ ಯಾವ ಹೊರಗಿನ ವ್ಯಕ್ತಿಗಳೂ ಸಹ ಈ ವಿಷಯದಲ್ಲಿ ವಿಶ್ವವಿದ್ಯಾನಿಲಯಕ್ಕೆ ಬರುವ ಪ್ರಮೇಯವೇ ಇರುತ್ತಿರಲಿಲ್ಲ, ಇಷ್ಟೊಂದು ಚರ್ಚೆಗಳ ಅಗತ್ಯವೂ ಇರುತ್ತಿರಲಿಲ್ಲ. ವಾಸ್ತವದಲ್ಲಿ, ವಿಶ್ವವಿದ್ಯಾನಿಲಯದಲ್ಲಿ ನಡೆಯುತ್ತಿದ್ದ ಗಣೇಶೋತ್ಸವವನ್ನೇ ನಿಲ್ಲಿಸುವ ಹುನ್ನಾರದ ಭಾಗವಾಗಿ ಇಲ್ಲಸಲ್ಲದ ಗೊಂದಲ ಸೃಷ್ಟಿಸಿ ಸರಕಾರಕ್ಕೆ ಪತ್ರ ಬರೆಯಲಾಗಿತ್ತು. ಆದರೆ ಹಿಂದೂ ಸಮಾಜದ ತೀವ್ರ ವಿರೋಧ ಹಾಗೂ ಪ್ರತಿಭಟನೆಗೆ ಮಣಿದು ಕೊನೆಗೂ ಇದೀಗ ಬಂದಿರುವ ಆದೇಶದಂತೆ ವಿಶ್ವವಿದ್ಯಾನಿಲಯದ ಕುಲಪತಿಗಳು ಈ ಹಿಂದಿನಂತೆ ಮಂಗಳಾ ಸಭಾಂಗಣದಲ್ಲಿಯೇ ಗಣೇಶೋತ್ಸವ ಆಚರಿಸುತ್ತೇವೆಂದು ನಿರ್ಣಯಿಸಿದ್ದಾರೆ.
ಈ ಮೂಲಕ ಹಿಂದೂ ಸಮಾಜದ ಶ್ರದ್ಧೆ-ಭಕ್ತಿ-ನಂಬಿಕೆಯಂತಹ ಧಾರ್ಮಿಕ ಆಚರಣೆಗಳಿಗೆ ಧಕ್ಕೆ ಉಂಟಾದಾಗ ಭಾರತೀಯ ಜನತಾ ಪಾರ್ಟಿ ಸದಾ ಹೋರಾಟಕ್ಕೆ ಸಿದ್ಧವಾಗಿರುತ್ತದೆ ಎಂಬ ಸ್ಪಷ್ಟ ಸಂದೇಶವನ್ನು ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ಹಾಗೂ ಸಂಬಂಧಪಟ್ಟವರಿಗೆ ನೀಡ ಬಯಸುತ್ತೇನೆಂದು ಶಾಸಕ ವೇದವ್ಯಾಸ್ ಕಾಮತ್ ಹೇಳಿದ್ದಾರೆ.