ಬಾರ್ಕೂರು, ಸೆ. 16: ಶ್ರೀಮತಿ ರುಕ್ಮಿಣಿ ಶೆಡ್ತಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಬಾರ್ಕೂರು ಇಲ್ಲಿನ ಇಂಗ್ಲಿಷ್ ವಿಭಾಗ ಮತ್ತು ಸಾಂಸ್ಕೃತಿಕ ಸಮಿತಿಯ ಸಹಭಾಗಿತ್ವದಲ್ಲಿ ರಂಗಭೂಮಿಯ ಕುರಿತಾಗಿ ಒಂದು ದಿನದ ಕಾರ್ಯಾಗಾರ ನಡೆಯಿತು. ಕಾಲೇಜಿನ ಪ್ರಾಂಶುಪಾಲ ಡಾ. ರಮೇಶ್ ಆಚಾರ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಸರಕಾರಿ ಪ್ರೌಢಶಾಲೆ ಮಾವಿನಕಟ್ಟೆ ಇಲ್ಲಿಯ ನಾಟಕ ಶಿಕ್ಷಕರಾದ ಡಾ. ವೆಂಕಟೇಶ್ವರ ಕೆ ಇವರು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದರು. ನಾಟಕದ ಹುಟ್ಟು, ಬೆಳವಣಿಗೆಯ ಬಗೆಯನ್ನು ಗ್ರೀಕ್ ನಾಟಕದ ಹಿನ್ನೆಲೆಯಲ್ಲಿ ವಿಶ್ಲೇಷಿಸಿದರು. ಸಾಮುದಾಯಿಕ ಕಲೆಯಾದ ರಂಗಭೂಮಿಯು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಅತ್ಯಂತ ಪರಿಣಾಮಕಾರಿ ಮಾಧ್ಯಮ.ಪದವಿ ವಿದ್ಯಾರ್ಥಿಗಳು ಅತ್ಯಂತ ಕ್ರಿಯಾಶೀಲ ಸಾಂಸ್ಕೃತಿಕ ಸಂವೇದಿ ವ್ಯಕ್ತಿಗಳಾಗಿ ಹೊರಹೊಮ್ಮಲು ರಂಗಭೂಮಿಯು ಸಶಕ್ತ ಮಾಧ್ಯಮ ಎಂಬುದನ್ನು ಕೆಲ ಪ್ರಾಯೋಗಿಕ ಚಟುವಟಿಕೆಗಳ ಮೂಲಕ ಪರಿಣಾಮಕಾರಿಯಾಗಿ ಅಭಿವ್ಯಕ್ತಿಸಿದರು.
ಅಂತರ್ರಾಷ್ಟ್ರೀಯ ಪ್ರಜಾಪ್ರಭುತ್ವ ದಿನದಂದೇ ಈ ಕಾರ್ಯಗಾರ ಆಯೋಜಿತವಾಗಿದ್ದರಿಂದ ಸಂವಿಧಾನದ ಪೀಠಿಕೆಯನ್ನು ಆಯ್ದ ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ಶಿಬಿರದ ಕೊನೆಯಲ್ಲಿ ಪ್ರಸ್ತುತ ಪಡಿಸಲಾಯಿತು. ರಂಗ ಮಾಧ್ಯಮವು ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಒಳಗೊಂಡಿರುವ ಮಾಧ್ಯಮವಾಗಿದ್ದು, ಸಮಾಜದಲ್ಲಿ ಸಮಾನತೆ ನೆಲೆಸಲು ಈ ಪ್ರಕ್ರಿಯೆಯು ಕಾಲೇಜು ವಿದ್ಯಾರ್ಥಿಗಳಿಗೆ ಅತ್ಯಂತ ಅವಶ್ಯಕವಾಗಿದೆ ಎಂಬುದನ್ನು ಪರಿಣಾಮಕಾರಿಯಾಗಿ ಮಂಡಿಸಲಾಯಿತು.
ಕಾರ್ಯಗಾರದಲ್ಲಿ ಐಕ್ಯೂಎಸಿ ಸಂಚಾಲಕರಾದ ವಿದ್ಯಾ, ಇಂಗ್ಲೀಷ್ ವಿಭಾಗದ ಮುಖ್ಯಸ್ಥರೂ ಹಾಗೂ ಸಾಂಸ್ಕೃತಿಕ ಸಮಿತಿಯ ಸಂಚಾಲಕರೂ ನಿರಂಜನ ಶರ್ಮ ಉಪಸ್ಥಿತರಿದ್ದರು. ಸುಜನ್ ಪ್ರಾರ್ಥಿಸಿದರು. ಅನನ್ಯ ಸ್ವಾಗತಿಸಿ, ದರ್ಶನ್ ಶಾಸ್ತ್ರಿ ವಂದಿಸಿದರು. ಸೌಂದರ್ಯ ಕಾರ್ಯಕ್ರಮ ನಿರೂಪಿಸಿದರು.