ಕಾರ್ಕಳ, ಸೆ. 16: ಕನ್ನಡ ಸಾಹಿತ್ಯ ಪರಿಷತ್ ಕಾರ್ಕಳ ಘಟಕದ ವತಿಯಿಂದ ಕನ್ನಡ ಡಿಂಡಿಮ ಮತ್ತು ಸರ್ ಎಂ ವಿಶ್ವೇಶ್ವರಯ್ಯ ಅವರ ಹುಟ್ಟಿದ ಹಬ್ಬದ ಆಚರಣೆಯ ಕಾರ್ಯಕ್ರಮ ಇನ್ನಾ ಆಯುರ್ವೇದ ಭೂಷಣ ಎಂ ವಿ ಶಾಸ್ತ್ರಿ ಪ್ರೌಢಶಾಲೆಯಲ್ಲಿ ಜರಗಿತು. ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ ಅವರು ಅಧ್ಯಕ್ಷತೆ ವಹಿಸಿದ್ದರು.
ಕನ್ನಡ ಡಿಂಡಿಮ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟನೆ ಮಾಡಿದ ಇನ್ನಾ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸರಿತಾ ಶೆಟ್ಟಿ ಅವರು ಕಾರ್ಯಕ್ರಮಕ್ಕೆ ಶುಭಕೋರಿದರು. ಇನ್ನಾ ಎಂ ವಿ ಶಾಸ್ತ್ರಿ ಪ್ರೌಢಶಾಲೆಯ ಮುಖ್ಯಗುರುಗಳಾದ ರಾಜೇಂದ್ರ ಭಟ್ ಕೆ ಅವರು ಸರ್ ಎಂ ವಿಶ್ವೇಶ್ವರಯ್ಯ ಅವರ ಬಗ್ಗೆ ಮಾತನಾಡುತ್ತಾ, ಮೋಕ್ಷಗುಂಡಂ ವಿಶ್ವೇಶ್ವರಯ್ಯ ಅವರು ನೂರಾರು ಸಂಸ್ಥೆಗಳನ್ನು ಹುಟ್ಟುಹಾಕಿ ಬೆಳೆಸುವ ಕೆಲಸ ಮಾಡಿದರು. ಅವರು ಮೈಸೂರು ದಿವಾನರಾಗಿ ಇದ್ದಾಗ ನಾಲ್ಮಡಿ ಕೃಷ್ಣರಾಜ ಒಡೆಯರ್ ಅವರ ಪ್ರೇರಣೆಯಿಂದ ಕನ್ನಡ ಸಾಹಿತ್ಯ ಪರಿಷತ್ ಉದ್ಘಾಟನೆ ಆದದ್ದು ಮರೆಯಲಾಗದ ಘಟನೆ ಆಗಿದೆ. ಅವರು ಆಧುನಿಕ ಕರ್ನಾಟಕದ ನಿರ್ಮಾಪಕ ಅನ್ನುವುದರಲ್ಲಿ ಯಾವುದೇ ಸಂಶಯ ಇಲ್ಲ ಎಂದರು. ಆಶಯದ ನುಡಿಗಳನ್ನು ಆಡಿದ ಕಾರ್ಕಳ ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ್ ಶೆಟ್ಟಿ ಅವರು, ಕನ್ನಡ ಸಾಹಿತ್ಯದ ತೇರನ್ನು ಶಾಲಾ ಕಾಲೇಜುಗಳ ವಿದ್ಯಾರ್ಥಿಗಳ ಅಂಗಳಕ್ಕೆ ತಲುಪಿಸುವುದು ಕನ್ನಡ ಡಿಂಡಿಮ ಕಾರ್ಯಕ್ರಮದ ಉದ್ದೇಶ. ಅದರ ಯಶಸ್ಸಿಗೆ ಎಲ್ಲರ ಬೆಂಬಲ ಅಗತ್ಯ ಎಂದರು.
‘ಹಿರಿಯರೆಡೆಗೆ ಸಾಹಿತ್ಯದ ನಡಿಗೆ’ ಕಾರ್ಯಕ್ರಮದ ಅಂಗವಾಗಿ ಇನ್ನಾ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಜಯ ಎಸ್ ಕೋಟ್ಯಾನ್ ಅವರ ಸಮಾಜ ಸೇವೆಯನ್ನು ಪರಿಗಣಿಸಿ ಅವರಿಗೆ ಮಾನಪತ್ರ, ಫಲಪುಷ್ಪ, ಭುವನೇಶ್ವರಿಯ ಮೂರ್ತಿ ಮತ್ತು ಹಾರ ಸಹಿತ ಸನ್ಮಾನಿಸಲಾಯಿತು. ಕಸಾಪ ಗೌರವ ಕೋಶಾಧಿಕಾರಿ ಅರುಣ್ ರಾವ್ ಮುಂಡ್ಕೂರು ಅವರು ಮಾನಪತ್ರವನ್ನು ಓದಿದರು. ಜಯ ಎಸ್ ಕೋಟ್ಯಾನ್ ಅವರು ಸನ್ಮಾನಕ್ಕೆ ಉತ್ತರಿಸಿ ಸಾಹಿತ್ಯ ಪರಿಷತ್ ಸಂಸ್ಥೆಗೆ ಧನ್ಯವಾದ ಅರ್ಪಿಸಿದರು.
ಶಾಲೆಯ ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ದೀಪಕ್ ಕೋಟ್ಯಾನ್ ಅವರು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಿ ಕನ್ನಡ ಮಾಧ್ಯಮ ಶಾಲೆಗಳು ಉಳಿಯಬೇಕು. ಶಾಲೆಗಳು ಅಳಿದರೆ ಕನ್ನಡ ಸಂಸ್ಕೃತಿಯು ನಾಶವಾಗುತ್ತದೆ ಎಂದರು. ಮುಖ್ಯ ಶಿಕ್ಷಕ ರಾಜೇಂದ್ರ ಭಟ್ ಕೆ ಅವರು ಸಲ್ಲಿಸಿದ ಕನ್ನಡದ ಸೇವೆಯನ್ನು ಪರಿಗಣಿಸಿ ಸಾಹಿತ್ಯ ಪರಿಷತ್ ಅವರನ್ನು ಸನ್ಮಾನ ಮಾಡಿ ಗೌರವಿಸಿತು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ ಅವರು ಮಾತನಾಡಿ, ಹಿರಿಯರೆಡೆಗೆ ಸಾಹಿತ್ಯದ ನಡಿಗೆ ಕಾರ್ಯಕ್ರಮದ ಅಂಗವಾಗಿ ಈಗಾಗಲೇ 150ಕ್ಕೂ ಅಧಿಕ ಮಹನೀಯರನ್ನು ಪರಿಷತ್ ಸನ್ಮಾನ ಮಾಡಿದೆ. ಕನ್ನಡದ ಸೇವೆಯನ್ನು ಪ್ರತಿಯೊಬ್ಬರೂ ಸಲ್ಲಿಸಲು ಸಿದ್ಧರಾಗಬೇಕು ಎಂದರು. ಅವರು ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಅಭಿರುಚಿ ಮೂಡಿಸುವ ಸಾಹಿತ್ಯದ ಕಾರ್ಯಾಗಾರವನ್ನು ನಡೆಸಿಕೊಟ್ಟರು. ಕನ್ನಡ ಅಧ್ಯಾಪಕಿ ವಾಣಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ದಿನೇಶ್ ನಾಯಕ್ ವಂದಿಸಿದರು. ನಂತರ ಶಾಲೆಯ ವಿದ್ಯಾರ್ಥಿಗಳಿಂದ ಗೀತ ಗಾಯನ, ಸ್ವರಚಿತ ಕವನ ವಾಚನ ಮತ್ತು ಅಭಿನಯ ಗೀತೆಗಳ ಪ್ರದರ್ಶನ ನಡೆಯಿತು.