ಉಡುಪಿ, ಸೆ. 15: ಉಡುಪಿ ಜಿಲ್ಲೆಯ ಆದಿ ಉಡುಪಿಯಲ್ಲಿರುವ ಕಂಗೂರು ಶ್ರೀ ಗೋಪಿನಾಥ ಮಠದ ಆವರಣದಲ್ಲಿನ ಶಾಸನಗಳ ಮರು ಅಧ್ಯಯನವನ್ನು ಮಿಲಾಗ್ರಿಸ್ ಕಾಲೇಜು – ಕಲ್ಯಾಣಪುರ ಇಲ್ಲಿನ ವಿಶ್ರಾಂತ ಉಪನ್ಯಾಸಕರಾದ ಜಿ.ಎಸ್. ರಾಮಚಂದ್ರ ಮತ್ತು ಪ್ರಾಚ್ಯಸಂಚಯ ಸಂಶೋಧನ ಕೇಂದ್ರ-ಉಡುಪಿ ಇದರ ಅಧ್ಯಯನ ನಿರ್ದೇಶಕರಾದ ಪ್ರೊ. ಎಸ್.ಎ.ಕೃಷ್ಣಯ್ಯ ಅವರ ಮಾರ್ಗದರ್ಶನದಲ್ಲಿ ಇತಿಹಾಸ ಮತ್ತು ಪುರಾತತ್ವ ಸಂಶೋಧನಾರ್ಥಿ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಅವರು ಮರು ಅಧ್ಯಯನಕ್ಕೆ ಒಳಪಡಿಸಿರುತ್ತಾರೆ.
ವಿಜಯನಗರ ಕಾಲಮಾನದ (14-15ನೆ ಶತಮಾನ) 4 ಶಾಸನಗಳು ಇಲ್ಲಿದ್ದು, ಇವುಗಳಲ್ಲಿ ಎರಡು ಶಾಸನಗಳು ಇಮ್ಮಡಿ ಹರಿಹರ, ಒಂದು ಶಾಸನ ಇಮ್ಮಡಿ ದೇವರಾಯ ಹಾಗೂ ಇನ್ನೊಂದು ಶಾಸನದ ಹೆಚ್ಚಿನ ಅಕ್ಷರಗಳು ತೃಟಿತಗೊಂಡಿದ್ದು ಗೋಚರಿಸುವ ಲಿಪಿಯ ಆಧಾರದ ಮೇಲೆ 14ನೆ ಶತಮಾನಕ್ಕೆ ಸೇರಿದೆ ಎಂದು ಸಂಶೋಧನಾರ್ಥಿಯು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಎಲ್ಲಾ ದಾನ ಶಾಸನಗಳನ್ನು ಗ್ರಾನೈಟ್ (ಕಣ) ಶಿಲೆಯಲ್ಲಿ ಕೊರೆಯಲ್ಪಟ್ಟಿದ್ದು ಶಾಸನದ ಮೇಲ್ಭಾಗದಲ್ಲಿ ಸೂರ್ಯ-ಚಂದ್ರ, ಶಂಖ-ಚಕ್ರ, ರಾಜಕತ್ತಿ, ಬ್ರಾಹ್ಮಣ ವಠು (ವಾಮನ) ಮತ್ತು ದೀಪಕಂಬದ ಉಬ್ಬು ಕೆತ್ತನೆಯಿದೆ.
ಬಾರಕೂರಿನ ರಾಜ್ಯಪಾಲರಾಗಿದ್ದ ಬೊಮ್ಮರಸ ಮತ್ತು ಚಂಡರಸ ಒಡೆಯನ ಕಾಲಾವಧಿಯಲ್ಲಿ ಕಂಗು ಮಠದ (ಪ್ರಸ್ತುತ ಕಂಗೂರು ಮಠ) ದೇವರುಗಳಾದ ನಾರಾಯಣ, ರಾಮಚಂದ್ರ, ಗೋಪಿನಾಥ ಮತ್ತು ವಿಠಲ ದೇವರ ಅಮ್ರುತಪಡಿ ಮತ್ತು ನಂದಾದೀಪ್ತಿಗೆ ಬಿಟ್ಟಂತಹ ಭೂ ದಾನಗಳನ್ನು ಉಲ್ಲೇಖ ಮಾಡುತ್ತದೆ. ಇದರಲ್ಲಿ ಇಮ್ಮಡಿ ದೇವರಾಯನ ಎರಡು ಶಾಸನಗಳನ್ನು ಒಂದೇ ಶಿಲೆಯಲ್ಲಿ ಕೊರೆದಿದ್ದು, ಇದು ಮುಖ್ಯವಾಗಿ ಕಂಗು ಮಠದ ಶ್ರೀ ರಾಮ ದೇವರ ಆರಾಧಕರಾದ ಪುಂಣ್ಯಕೀರ್ತಿ ತೀರ್ಥ ಶ್ರೀಪಾದಂಗಳ ಉಲ್ಲೇಖವನ್ನು ಹಾಗೂ ಇಲ್ಲಿನ ದೇವರುಗಳ ಜಯಂತಿಗೆ 100 ಹೊಂನನು ದಾನವಾಗಿ ನೀಡಿದ್ದರ ಬಗ್ಗೆ ತಿಳಿಸುತ್ತದೆ. ಶಾಸನಗಳ ಆಧಾರದ ಮೇಲೆ ಈ ಮಠದ ಉಲ್ಲೇಖವನ್ನು 14-15ನೆ ಶತಮಾನದಿಂದ ಕಾಣಬಹುದಾದರೂ, ಮಠದ ವಿಗ್ರಹವು 8ನೆ ಶತಮಾನಕ್ಕೆ ಸೇರಿದೆ ಎಂದು ಪ್ರತಿಮಾ ಲಕ್ಷಣದ ಆಧಾರದ ಮೇಲೆ ಪಾದೂರು ಗುರುರಾಜ ಭಟ್ಟರು ಅಭಿಪ್ರಾಯ ಪಟ್ಟಿದ್ದಾರೆ.
ಪ್ರಸ್ತುತ ಈ ಎಲ್ಲಾ ಶಾಸನಗಳನ್ನು ಮಠದ ಆವರಣದಲ್ಲಿ ಉತ್ತಮ ರೀತಿಯಲ್ಲಿ ಸಂರಕ್ಷಿಸಿದ್ದು, ಶಾಸನಗಳ ಸಂರಕ್ಷಣೆಯಲ್ಲಿ ಈ ಮಠದ ಆಡಳಿತ ಮಂಡಳಿಯ ಕಾರ್ಯ ಶ್ಲಾಘನಾರ್ಹ. ಕ್ಷೇತ್ರಕಾರ್ಯ ಸಂದರ್ಭದಲ್ಲಿ ಮೋಹನ ಉಪಾಧ್ಯ, ಶಾಂತರಾಮ್ ಭಟ್, ಶ್ರೀಶ ಭಟ್ ಕೊಡವೂರು ಮತ್ತು ಸ್ಥಳೀಯರು ಸಹಕಾರ ನೀಡಿರುತ್ತಾರೆ.