ಬೆಂಗಳೂರು, ಸೆ. 15: ಕೇರಳದಲ್ಲಿ ಮಾರಣಾಂತಿಕ ನಿಫಾ ಸೋಂಕು ಏರಿಕೆಯಾಗುತ್ತಿರುವ ಬೆನ್ನಲ್ಲಿ, ಕರ್ನಾಟಕ ಸರ್ಕಾರ ಎಚ್ಚೆತ್ತುಕೊಂಡಿದೆ. ಇದಕ್ಕೆ ಸಂಬಂಧಿಸಿದ ಮಾರ್ಗಸೂಚಿ ಪ್ರಕಟಿಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕೇರಳ ರಾಜ್ಯದ ಗಡಿಗಳಲ್ಲಿರುವ ಜಿಲ್ಲೆಗಳಾದ ಚಾಮರಾಜನಗರ, ಮೈಸೂರು, ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸೋಂಕು ಹರಡದಂತೆ ಕಟ್ಟೆಚ್ಚರ ವಹಿಸಲು ‘ಫೀವರ್ ಸರ್ವಿಲೆನ್ಸ್’ ಕೈಗೊಳ್ಳಲು ಚೆಕ್ ಪೋಸ್ಟ್ ಗಳನ್ನು ತೆರೆಯಲು ಸೂಚನೆ ನೀಡಿದೆ. ಕೇರಳದಲ್ಲಿ ಸೋಂಕು ಕಂಡುಬಂದಿರುವ ಪ್ರದೇಶಗಳಿಗೆ ಅನಾವಶ್ಯಕ ಪ್ರಯಾಣ ಮಾಡದಿರಲು ರಾಜ್ಯ ಸರ್ಕಾರ ಸೂಚನೆ ನೀಡಿದೆ.
ಶುಕ್ರವಾರ ಕೇರಳದ ಕೋಯಿಕ್ಕೋಡ್ ನಲ್ಲಿ ಮತ್ತೊಂದು ನಿಫಾ ಸೋಂಕಿನ ಪ್ರಕರಣ ಪತ್ತೆಯಾಗಿದ್ದು ಒಟ್ಟು ಸೋಂಕಿತರ ಸಂಖ್ಯೆ ಆರಕ್ಕೇರಿದೆ, ಇದರಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಕೇರಳದ ಕಂಡುಬಂದಿರುವ ಎಲ್ಲಾ ಪ್ರಕರಣಗಳು ಕೋಯಿಕ್ಕೋಡ್ ನಲ್ಲೇ ಪತ್ತೆಯಾಗಿರುವುದರಿಂದ ಜಿಲ್ಲೆಯಲ್ಲಿ ಸೆಪ್ಟೆಂಬರ್ 16 ರಂದು ಕೇರಳದ ಕೋಯಿಕ್ಕೋಡ್ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ಕೋಯಿಕ್ಕೋಡ್ ಜಿಲ್ಲಾಧಿಕಾರಿ ರಜೆಯನ್ನು ಘೋಷಿಸಿದ್ದಾರೆ. ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆ ಕೂಡ ನಿಗಾ ಕೇರಳ ಸರ್ಕಾರದ ಜತೆಗೆ ಸಮನ್ವಯ ಸಾಧಿಸಿ ನಿಗಾ ವಹಿಸಿದೆ.