ಉಡುಪಿ, ಸೆ. 13: ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಡೆಂಗ್ಯೂ ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಸ್ವಚ್ಛತೆ ಹಾಗೂ ತ್ಯಾಜ್ಯ ವಿಲೇವಾರಿ ಬಗ್ಗೆ ವಿಶೇಷ ಕ್ರಮ ವಹಿಸಿ ಡೆಂಗ್ಯೂ ಪ್ರಕರಣಗಳ ನಿಯಂತ್ರಣಕ್ಕೆ ಆದ್ಯತೆ ನೀಡುವಂತೆ ನಗರಸಭೆ ಅಧಿಕಾರಿಗಳಿಗೆ ಶಾಸಕ ಯಶ್ಪಾಲ್ ಸುವರ್ಣ ಸೂಚನೆ ನೀಡಿದರು. ಪ್ರಕರಣಗಳ ಗಂಭೀರತೆ ಗಮನಿಸಿ ಅಧಿಕಾರಿಗಳ ತುರ್ತು ಸಭೆಯನ್ನು ನಗರಸಭೆ ಕಚೇರಿಯಲ್ಲಿ ನಡೆಸಿದ ಶಾಸಕರು, ನಗರದಲ್ಲಿ ಕಟ್ಟಡ ಕಾಮಗಾರಿ ಪ್ರದೇಶದಲ್ಲಿ ಸ್ವಚ್ಚತೆ ಕಾಪಾಡುವ ಬಗ್ಗೆ ಎಲ್ಲಾ ಸಂಸ್ಥೆಗಳಿಗೆ ಸೂಚನೆ ನೀಡಿ ಪರಿಶೀಲನೆ ನಡೆಸುವಂತೆ ಅಧಿಕಾರಿಗಳಿಗೆ ತಿಳಿಸಿದರು.
ರಸ್ತೆ ಬದಿ ಗೂಡಂಗಡಿಗಳ ತ್ಯಾಜ್ಯ ವಸ್ತುಗಳ ಸೂಕ್ತ ವಿಲೇವಾರಿ ಮಾಡಿ ಸೊಳ್ಳೆ ಉತ್ಪತ್ತಿಯಾಗದಂತೆ ಕ್ರಮ ವಹಿಸುವಂತೆ ಅಂಗಡಿ ಮಾಲೀಕರಿಗೆ ಸೂಚನೆ ನೀಡಬೇಕು ಹಾಗೂ ನಿರಂತರ ಫಾಗಿಂಗ್ ಪ್ರಕ್ರಿಯೆ ಮಾಡುವಂತೆ ಹೇಳಿದರು. ನಗರಸಭಾ ವ್ಯಾಪ್ತಿಯ ಪ್ರಮುಖ ರಸ್ತೆಗಳ ಗುಂಡಿ ಮುಚ್ಚುವ ಕಾರ್ಯ ಹಾಗೂ ಗಣೇಶ ಚತುರ್ಥಿ ಮೆರವಣಿಗೆ ಸಾಗುವ ರಸ್ತೆಗಳ ಕಾಮಗಾರಿಗಳನ್ನು ತುರ್ತಾಗಿ ನಡೆಸಲು ಹೇಳಿದರು. ಸಭೆಯಲ್ಲಿ ಪೌರಾಯುಕ್ತರಾದ ರಾಯಪ್ಪ, ನಗರಸಭಾ ಸದಸ್ಯರಾದ ಪ್ರಭಾಕರ ಪೂಜಾರಿ, ಗಿರೀಶ್ ಅಂಚನ್, ಗಿರಿಧರ್ ಆಚಾರ್ಯ, ಕಲ್ಪನ ಸುಧಾಮ, ಗೀತಾ ಡಿ. ಶೇಟ್, ನಗರಸಭೆಯ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.