ಕಾರ್ಕಳ, ಸೆ. 11: ರಾಜ್ಯ ಅತ್ಯುತ್ತಮ ಯುವ ಮಂಡಲ ಪ್ರಶಸ್ತಿ ಪುರಸ್ಕೃತ ಯುವಕ ಮಂಡಲ (ರಿ.) ಸಾಣೂರು ಇವರ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮುದ್ದು ಮಕ್ಕಳಿಗೆ ಮುದ್ದು ಕೃಷ್ಣ ಸ್ಪರ್ಧೆ ಹಾಗೂ ಮಹಿಳೆಯರಿಗೆ, ಸಾರ್ವಜನಿಕರಿಗೆ ವಿವಿಧ ಸ್ಪರ್ಧಾ ಕಾರ್ಯಕ್ರಮಗಳು ಭಾನುವಾರ ಸಾಣೂರು ಶಿವರಾಮ ರೈ ಕಲಾ ವೇದಿಕೆಯಲ್ಲಿ ನಡೆಯಿತು. ಮಕ್ಕಳಿಗೆ ಒಂದರಿಂದ ಮೂರು ವರ್ಷ ಮತ್ತು ಮೂರರಿಂದ ಆರು ವರ್ಷ ಎರಡು ವಿಭಾಗದಲ್ಲಿ ನಡೆದ ಸ್ಪರ್ಧೆಯಲ್ಲಿ ಒಟ್ಟು 64 ಮಕ್ಕಳು ಪಾಲ್ಗೊಂಡಿದ್ದರು. ಕಾರ್ಯಕ್ರಮವನ್ನು ಸಾಣೂರಿನ ಉದ್ಯಮಿ ಸುರೇಶ್ ಕಾಮತ್ ಉದ್ಘಾಟಿಸಿದರು. ಮುದ್ದು ಕೃಷ್ಣ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೆ ನಗದು ಬಹುಮಾನ ನೀಡಿ ಪ್ರೋತ್ಸಾಹಿಸಿದರು.
ಬಹುಮಾನ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮುದ್ದಣ್ಣ ನಗರ ಸಾಣೂರು ಇಲ್ಲಿನ ಸಹ ಶಿಕ್ಷಕಿ ಗೀತಾ ಮಾತನಾಡಿ, ಸಂಸ್ಕಾರ ಸನ್ನಡತೆ ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾನವ ಜೀವನ ಪಾವನವಾಗುತ್ತದೆ. ಸಂಸ್ಕಾರವನ್ನು ಸಂಘಟನೆ ಮೂಲಕ ಮುನ್ನಡೆಸಿ ಎಂದು ಯುವಜತೆಗೆ ಕರೆ ನೀಡಿದರು. ವೇದಿಕೆಯಲ್ಲಿ ಶ್ರೀಮತಿ ಎಸ್ ರೈ, ಜೋಸ್ಸಿ ಕಿರಣ್ ಪಿಂಟೋ ಜೆ.ಎಂ.ಜೆ ಎಲೆಕ್ಟ್ರಾನಿಕ್ಸ್ ಕಾರ್ಕಳ, ಎಸ್. ಡಿ.ಎಂ. ಸಿ ಅಧ್ಯಕ್ಷರಾದ ಜಯಶ್ರೀ ದೇವಾಡಿಗ, ಶಕ್ತಿ ಸಮೃದ್ಧಿ ಸಂಜೀವಿನಿ ಒಕ್ಕೂಟ ಸಾಣೂರು ಅಧ್ಯಕ್ಷರಾದ ಜಯಲಕ್ಷ್ಮಿ ಶೆಟ್ಟಿಗಾರ್, ಹರೀಶ್ ರಾವ್, ರೋಹಿತ್ ಆರ್. ಕೆ., ತೀರ್ಪುಗಾರರ ಪರವಾಗಿ ಶಿಕ್ಷಕಿ ಮೃನಾಲಿ ಉಪಸ್ಥಿತರಿದ್ದರು.
ಮಂಡಲದ ಅಧ್ಯಕ್ಷರಾದ ಪ್ರಸಾದ್ ಪೂಜಾರಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಉಪಾಧ್ಯಕ್ಷರಾದ ಪ್ರಸಾದ್ ಶೆಟ್ಟಿ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಸಾಂಸ್ಕೃತಿಕ ಕಾರ್ಯದರ್ಶಿ ಚಂದ್ರಹಾಸ್ ಪೂಜಾರಿ ವಂದಿಸಿದರು. ರಾಜೇಶ್, ಶುಭಕರ್ ಶೆಟ್ಟಿ, ಸುದರ್ಶನ್ ನಾಯ್ಕ್, ಪ್ರಕಾಶ್ ರಾವ್ ಸಹಕರಿಸಿದರು. ಕಾರ್ಯದರ್ಶಿ ಮೋಹನ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.