ನವದೆಹಲಿ, ಸೆ. 10: ಜಿ20 ಶೃಂಗಸಭೆಗೆ ಆಗಮಿಸಿದ ಬ್ರಿಟನ್ ಪ್ರಧಾನಿ ರಿಷಿ ಸುನಾಕ್ ಅವರು ಪತ್ನಿ ಅಕ್ಷತಾ ಮೂರ್ತಿ ಜತೆ ಭಾನುವಾರ ನವದೆಹಲಿಯ ಅಕ್ಷರಧಾಮ ದೇವಾಲಯಕ್ಕೆ ಭೇಟಿ ನೀಡಿ ಅಭಿಷೇಕ ಸೇವೆ ಮಾಡಿ, ಆರತಿ ಬೆಳಗಿಸಿ ಪೂಜೆ ಸಲ್ಲಿಸಿದರು.
ಭಾನುವಾರ ಮುಂಜಾನೆ ಬಿಳಿ ಶರ್ಟ್ ಮತ್ತು ನೀಲಿ ಪ್ಯಾಂಟ್ ಧರಿಸಿದ ರಿಷಿ ಸುನಾಕ್ ಮತ್ತು ಸಲ್ವಾರ್ ಕುರ್ತಾ ಧರಿಸಿದ ಅಕ್ಷತಾ ಮೂರ್ತಿ ದೇವಾಲಯಕ್ಕೆ ತೆರಳಿ ಲೋಕಕಲ್ಯಾಣಾರ್ಥಕ್ಕಾಗಿ ಪ್ರಾರ್ಥನೆ ಸಲ್ಲಿಸಿದರು. ಬ್ರಿಟನ್ ಪ್ರಧಾನಿಯನ್ನು ದೇವಾಲಯದಲ್ಲಿ ಮಹಾಂತ ಸ್ವಾಮಿ ಮಹಾರಾಜ್ ಪರವಾಗಿ ಸ್ವಾಮಿಗಳು ಸ್ವಾಗತಿಸಿದರು. 100 ಎಕರೆ ಪ್ರದೇಶದಲ್ಲಿರುವ ದೇವಾಲಯದ ವಾಸ್ತು ಶಿಲ್ಪದ ಬಗ್ಗೆ ಸುನಾಕ್ ದಂಪತಿ ಮೆಚ್ಚುಗೆ ವ್ಯಕ್ತಪಡಿಸಿದರು.