ಬ್ರಹ್ಮಾವರ, ಸೆ. 10: ಜಿಲ್ಲಾ ಪಂಚಾಯತ್ ಉಡುಪಿ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ, ಕೃಷಿ ವಿಜ್ಜಾನ ಕೇಂದ್ರ ಬ್ರಹ್ಮಾವರ ಇವರ ಆಶ್ರಯದಲ್ಲಿ ಕೃಷಿ ಜೀವನೋಪಾಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳಾದ ಕೃಷಿ ಸಖಿಯರಿಗೆ ಪರಿಸರ ಕೃಷಿ ವಿಧಾನಗಳ ಕುರಿತ 6 ದಿನದ ತರಬೇತಿಯ ಸಮಾರೋಪ ಸಮಾರಂಭ ಬ್ರಹ್ಮಾವರ ಕೃಷಿ ವಿಜ್ಜಾನ ಕೇಂದ್ರದಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಜಿಲ್ಲಾ ಪಂಚಾಯತ್ ನ ಯೋಜನಾ ನಿರ್ದೇಶಕರಾದ ಗುರುದತ್ ಎಮ್ ಎನ್ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡುತ್ತಾ, ಇಂದು ಜಿಲ್ಲೆಯಲ್ಲಿ ಕೃಷಿ ಚಟುವಟಿಕೆ ಅಭಿವೃದ್ಧಿಪಡಿಸಲು ಹಾಗೂ ಕೃಷಿ ಕ್ಷೇತ್ರಕ್ಕೆ ಸಂಬಂಧಪಟ್ಟ ಸೇವೆಗಳನ್ನು ನೀಡಲು ಕೃಷಿ ಸಖಿಯರನ್ನು ಪ್ರತಿ ಗ್ರಾಮ ಪಂಚಾಯತ್ ನಲ್ಲಿ ನಿಯೋಜನೆ ಮಾಡಲಾಗಿದೆ. ಕೃಷಿ ಕೇಂದ್ರದ ಅನುಭವಿ ಹಾಗೂ ಹಿರಿಯ ಕೃಷಿ ವಿಜ್ಞಾನಿಗಳಿಂದ ತರಬೇತಿ ಪಡೆದ ಕೃಷಿ ಸಖಿಯರು ಗ್ರಾಮ ಪಂಚಾಯತ್ ಗಳಲ್ಲಿ ಕಿರಿಯ ವಿಜ್ಞಾನಿಗಳಂತೆ ಕರ್ತವ್ಯ ನಿರ್ವಹಿಸಬೇಕು.
ಕೃಷಿ ಸಖಿಯರು ವಿವಿಧ ಇಲಾಖೆಯ ಕೃಷಿ ಸಂಬಂಧಿಸಿದ ಯೋಜನೆಗಳನ್ನು, ತರಬೇತಿಗಳನ್ನು, ಸೌಲಭ್ಯಗಳನ್ನು ರೈತ ಮಹಿಳೆಯರಿಗೆ ತಲುಪಿಸಲು ಕೃಷಿ ಸ್ನೇಹಿತೆಯಾಗಿ ಕರ್ತವ್ಯ ನಿರ್ವಹಿಸಬೇಕು, ತನ್ಮೂಲಕ ನಾಲ್ಕು ಗೋಡೆಗಳ ಮಧ್ಯ ಪಡೆದ ತರಬೇತಿಯನ್ನು ಗ್ರಾಮೀಣ ಪ್ರದೇಶದ ಬಡ ರೈತರ ಸಬಲೀಕರಣಕ್ಕೆ ಆಸಕ್ತಿಯಿಂದ ಶ್ರಮಿಸಬೇಕೆಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಹ ಸಂಶೋಧನಾ ನಿರ್ದೇಶಕ ಡಾ. ಲಕ್ಷ್ಮಣ, ತರಬೇತಿ ಪಡೆದ ಕೃಷಿ ಸಖಿಯರು ವಿವಿಧ ಇಲಾಖೆಗಳ ಸೌಲಭ್ಯಗಳನ್ನು ಗ್ರಾಮ ಮಟ್ಟದ ರೈತರಿಗೆ ತಲುಪಿಸಲು ಸೇತುವೆಯ ರೀತಿ ಕೆಲಸ ನಿರ್ವಹಿಸಬೇಕು ಹಾಗೂ ಗ್ರಾಮೀಣ ಪ್ರದೇಶದ ರೈತರ ಆದಾಯವನ್ನು ದ್ವಿಗುಣಗೊಳಿಸಲು ಸಂಬಂಧಪಟ್ಟ ಇಲಾಖೆಯ ಜೊತೆಯಲ್ಲಿ ಕೃಷಿ ಸಖಿಯರು ಕೈಜೋಡಿಸಬೇಕೆಂದರು. ಮುಖ್ಯ ಅತಿಥಿಗಳಾಗಿ ಹಿರಿಯ ವಿಜ್ಞಾನಿಗಳು ಮತ್ತು ಕೃಷಿ ವಿಜ್ಞಾನ ಕೇಂದ್ರ ಮುಖ್ಯಸ್ಥ ಡಾ. ಬಿ ಧನಂಜಯ್, ಡಿಪ್ಲೊಮಾ ಕೃಷಿ ಮಹಾವಿದ್ಯಾಲಯ ಬ್ರಹ್ಮಾವರ ಪ್ರಾಂಶುಪಾಲ ಡಾ ಸುಧೀರ್ ಕಾಮತ್ ಕೆ. ವಿ., ಜಿಲ್ಲಾ ವ್ಯವಸ್ಥಾಪಕ ಅವಿನಾಶ್ ಉಪಸ್ಥಿತರಿದ್ದರು. ಕೃಷಿ ಸಖಿಯರಾದ ಸುಗಂಧಿ, ಸುಜಾತಾ, ಶಶಿಕಲಾ, ಹೇಮಲತಾ ತರಬೇತಿ ಅನುಭವ ಹಂಚಿಕೊಂಡರು. ವಿಜ್ಞಾನಿ ಡಾ. ರವಿರಾಜ್ ಶೆಟ್ಟಿ ವಂದಿಸಿ, ಡಾ. ಸದಾನಂದ ಆಚಾರ್ಯ ಬಿ ಕಾರ್ಯಕ್ರಮ ನಿರೂಪಿಸಿದರು.