ಇರಾ, ಸೆ. 8: ಇರಾ ಯಕ್ಷಗಾನದ ತವರೂರು. ಈ ಗ್ರಾಮ ಹಲವಾರು ಕಲಾವಿದರನ್ನು ನೀಡಿದೆ. ಇಲ್ಲಿನ ಯುವಕರು ಯಕ್ಷಗಾನದ ಪರಂಪರೆಯನ್ನು ಉಳಿಸುವಲ್ಲಿ ಬಹಳ ಪ್ರಾಮುಖ್ಯತೆಯನ್ನು ನೀಡುತ್ತಿದ್ದಾರೆ. ಇರಾ ಯುವಕ ಮಂಡಲದ ಇಂತಹ ಕಾರ್ಯಕ್ರಮಗಳು ಬಹಳ ಶ್ಲಾಘನೀಯ ಎಂದು ಎ.ಜೆ. ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕರಾದ ಡಾ. ರಾಜೇಶ್ ರೈ ಅಗರಿ ಪಾಲ್ತಾಜೆ ಹೇಳಿದರು. ಯುವಕ ಮಂಡಲ (ರಿ.) ಇರಾ ಇದರ ಸುವರ್ಣ ಮಹೋತ್ಸವದ ಪ್ರಯುಕ್ತ ಶ್ರೀ ಕೃಷ್ಣ ಜನ್ಮಾಷ್ಠಮಿಯ ಅಂಗವಾಗಿ ಇರಾ ಶ್ರೀ ಸೋಮನಾಥೇಶ್ವರ ದೇವಸ್ಥಾನದ ವಠಾರದಲ್ಲಿ, ಯುವಕ ಮಂಡಲದ ಸದಸ್ಯರು ನಡೆಸಿದ ಸಾಂಸ್ಕೃತಿಕ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ವೇದಿಕೆಯಲ್ಲಿ ಪ್ರಗತಿ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕರಾದ ಡಾ. ಸುಭೋದ್ ಭಂಡಾರಿ ಬಾವಬೀಡು, ಯುವಕ ಮಂಡಲ ಸುವರ್ಣ ಮಹೋತ್ಸವ ಸಮಿತಿಯ ಗೌರವ ಅಧ್ಯಕ್ಷರಾದ ಪಿ.ಎಂ. ಕೊಡಂಗೆ, ಪ್ರಧಾನ ಸಂಚಾಲಕರಾದ ಜಗದೀಶ್ ಶೆಟ್ಟಿ ಇರಾಗುತ್ತು, ಅಧ್ಯಕ್ಷರಾದ ಜಯರಾಮ್ ಪೂಜಾರಿ ಸೂತ್ರಬೈಲು, ಯುವಕ ಮಂಡಲ ಅಧ್ಯಕ್ಷರಾದ ಗಣೇಶ್ ಕೊಟ್ಟಾರಿ ಸಂಪಿಲ ಉಪಸ್ಥಿತರಿದ್ದರು. ಸಂಘದ ಹಿರಿಯ ಸದಸ್ಯರಾದ ಯತಿರಾಜ ಶೆಟ್ಟಿ ಸಂಪಿಲ ಕಾರ್ಯಕ್ರಮ ನಿರೂಪಿಸಿದರು. ಸುವರ್ಣ ಮಹೋತ್ಸವ ಸಮಿತಿಯ ಕಾರ್ಯದರ್ಶಿಗಳಾದ ಸುರೇಶ್ ರೈ ಪರ್ಲಡ್ಕ ವಂದಿಸಿದರು. ನಂತರ ಯುವಕ ಮಂಡಲದ ಸದಸ್ಯರು ಹಾಗು ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಶ್ರೀ ಕೃಷ್ಣಲೀಲೆ-ಕಂಸ ವಧೆ ಎಂಬ ಯಕ್ಷಗಾನ ಬಯಲಾಟ ನಡೆಯಿತು.