ವಿದ್ಯಾಗಿರಿ, ಸೆ. 8: ಸಂಸ್ಕೃತ ಕಲಿತರೆ ಬದುಕಿಗೆ ಭದ್ರ ನೆಲೆಗಟ್ಟು ಸಿಗುತ್ತದೆ ಎಂದು ಕವಿ, ಜ್ಯೋತಿಷಿ ಸುಧಾಕರ ತಂತ್ರಿ ಸಂಪಿಗೆ ಹೇಳಿದರು. ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಸಂಸ್ಕೃತ ವಿಭಾಗ ಹಾಗೂ ಪ್ರಜ್ಞಾ ಸಂಸ್ಕೃತ ವೇದಿಕೆ ಶುಕ್ರವಾರ ಹಮ್ಮಿಕೊಂಡಿದ್ದ ‘ವಿಶ್ವ ಸಂಸ್ಕೃತ ದಿನ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಂಸ್ಕೃತ ಕಲಿತಾಗ ಸಂಸ್ಕೃತಿ ಬರುತ್ತದೆ. ಅದರಿಂದ ಸಂಸ್ಕಾರ ರೂಢಿಯಾಗುತ್ತದೆ. ಸಂಸ್ಕೃತ ಶ್ಲೋಕಗಳಲ್ಲಿ ಅಂತಹ ಜ್ಞಾನ ಇದೆ. ನಮಗೆ ಪ್ರಜ್ಞೆ ಮೂಡಿಸುತ್ತದೆ ಎಂದರು.
ಭಾರತೀಯ ಖಗೋಳಶಾಸ್ತ್ರಕ್ಕೆ ಪ್ರಾಚೀನರ ಕೊಡುಗೆ ಮತ್ತು ಚಂದ್ರಯಾನ ಕುರಿತು ಉಪನ್ಯಾಸ ನೀಡಿದ ಉಡುಪಿ ಎಸ್ಎಂಎಸ್ಪಿ ಕಾಲೇಜು ಜ್ಯೋತಿಷ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ರಾಧಾಕೃಷ್ಣ ಬಿ., ಮೋಕ್ಷಕ್ಕೆ ಕರೆದೊಯ್ಯುವ ವಿದ್ಯೆಯನ್ನು ಅಧ್ಯಯನ ಮಾಡಬೇಕು ಎಂಬುದನ್ನು ಸಂಸ್ಕೃತ ತಿಳಿಸುತ್ತದೆ ಎಂದರು. ಜ್ಯೋತಿಷ್ಯ ಎಂದರೆ ಫಲ ಹೇಳುವುದು ಮಾತ್ರವಲ್ಲ. ಜ್ಯೋತಿಷ್ಯದಲ್ಲಿ ಸಿದ್ಧಾಂತ (ಗಣಿತ), ಸಂಹಿತಾ (ಸಂಭನೀಯ), ಹೋರ(ಫಲ) ಎಂಬ ಮೂರು ಪ್ರಮುಖ ವಿಭಾಗಗಳಿವೆ. ಖಗೋಳ ಅಧ್ಯಯನವು ಬಹುಮುಖ್ಯವಾಗಿದೆ ಎಂದರು. ಶಾಸ್ತ್ರದಲ್ಲಿರುವ ಖಗೋಳ ಶಾಸ್ತ್ರವನ್ನು ಚೆನ್ನಾಗಿ ಅರಿತಾಗ ಮಾತ್ರ ಜ್ಯೋತಿಷ್ಯ ಸಿದ್ಧಿಸಲು ಸಾಧ್ಯ ಎಂದರು.
ನಮ್ಮ ದೇಶದಲ್ಲಿ ಖಗೋಳಶಾಸ್ತ್ರ ಜ್ಞಾನವು ೩೭ ಲಕ್ಷ ವರ್ಷದ ಹಿಂದೆ ಇತ್ತು. ನಮ್ಮದು ಭೂ ಕೇಂದ್ರಿತ ಸಿದ್ಧಾಂತ ಆಗಿತ್ತು. ವಾರ ಲೆಕ್ಕ ಹಾಕುವ ಪರಿಕಲ್ಪನೆ ನೀಡಿದ್ದರು. ಗ್ರಹಣವನ್ನು ಹೇಳುತ್ತಿದ್ದರು. ಗ್ರಹಣ ಗಣಿತದ ಮೂಲಕ ಎಷ್ಟೋ ಲಕ್ಷ ವರ್ಷಗಳ ಬಳಿಕ ಸಂಭವಿಸುವ ಗ್ರಹಣವನ್ನು ಹೇಳುವ ಸಾಮರ್ಥ್ಯವೂ ಇದೆ ಎಂದರು. ಗ್ರಹ ಮತ್ತು ಭೂಮಿ ನಡುವಿನ ಅಂತರವನ್ನು ನಿರ್ಧರಿಸುತ್ತಿದ್ದರು. ಇದನ್ನೇ ಚಂದ್ರಯಾನ ಸಂದರ್ಭದಲ್ಲಿ ಬಳಸಲಾಗಿದೆ. ಋಷಿಗಳು ಚಂದ್ರನನ್ನು ‘ಶೀತ’ ಎಂದಿದ್ದು, ಅಲ್ಲಿ ಜಲ ಇದೆ ಎಂದು ಉಲ್ಲೇಖಿಸಿದ್ದರು. ಅದರ ಹುಡುಕಾಟ ಈಗ ನಡೆಯುತ್ತಿದೆ. ಆದರೆ, ಪುರಾಣ ಪ್ರಪಂಚದಲ್ಲೇ ಚಂದ್ರ ಯಾನ ಇತ್ತು ಎಂದರು. ಸಿದ್ಧಾಂತ ಶಿರೋಮಣಿಯಲ್ಲಿ ಭಾಸ್ಕರಾಚಾರ್ಯರು ಖಗೋಳದ ಬಗ್ಗೆ ಬಹುವ್ಯಾಖ್ಯಾನ ನೀಡಿದ್ದಾರೆ ಎಂದರು. ಆಳ್ವಾಸ್ ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ ಮಾತನಾಡಿ, ಆರ್ಥಿಕ ಪ್ರಗತಿಯೇ ಅಂತಿಮ ಅಲ್ಲ. ಜ್ಞಾನಕ್ಕಿಂತ ಮಿಗಿಲು ಬೇರೆ ಇಲ್ಲ ಎಂದರು. ಭಾರತೀಯರು ಉತ್ಕೃಷ್ಟ ಜ್ಞಾನ ಹೊಂದಿದ್ದರೂ, ಪಾಶ್ಚಾತ್ಯವೇ ಶ್ರೇಷ್ಠ ಎಂಬ ಭ್ರಮೆ ಇದೆ. ಭಾರತೀಯ ಜ್ಞಾನ ಶ್ರೇಷ್ಠತೆಯನ್ನು ಇಂಗ್ಲಿಷ್ ಕವಿ ವೈ. ಬಿ. ಈಟ್ಸ್ ಹೇಳಿದ್ದರು ಎಂದು ಅವರು ಎಂದು ಉಲ್ಲೇಖಿಸಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ, ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಉಪಸ್ಥಿತರಿದ್ದರು. ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥ ವಿನಾಯಕ ಭಟ್ಟ ಗಾಳಿಮನೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಾಯಕ ಪ್ರಾಧ್ಯಾಪಕ ಲಕ್ಷ್ಮೀಶ ಭಟ್ಟ ಹಾಗೂ ಸಹಾಯಕ ಪ್ರಾಧ್ಯಾಪಕಿ ಅಪರ್ಣಾ ಹೊಳ್ಳ ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿನಿ ಶ್ರಾವ್ಯ ಶೆಟ್ಟಿ, ವಂಶಿಕಾ ಸುಭಾಷಿತ ವಾಚಿಸಿದರು. ಅನಘಾ ಕಾರ್ಯಕ್ರಮ ನಿರೂಪಿಸಿದರು. ಆಶ್ವಿಜಾ ಪ್ರಾರ್ಥನೆ ಹಾಡಿದರು. ಸಿಂಧೂ ಭಟ್ಟ ಸ್ವಾಗತಿಸಿದರು.