ಕಾರ್ಕಳ, ಸೆ. 6: ನಾವು ಎಷ್ಟು ಉನ್ನತ ಸ್ಥಾನಕ್ಕೇರಿದರೂ ನಮ್ಮ ಜನ್ಮಭೂಮಿಯನ್ನು ನಾವು ಮರೆಯಬಾರದು. ನಮ್ಮ ನೆಲದ ಸಂಸ್ಕೃತಿ ಹಾಗೂ ಸಂಸ್ಕಾರವನ್ನು ವಿದೇಶಿಯರು ಅನುಸರಿಸುತ್ತಾರೆಂದರೆ ನಾವು ಹೆಮ್ಮೆ ಪಡಬೇಕು ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಮಾಜಿ ಸದಸ್ಯ ಶ್ಯಾಮಲಾ ಕುಂದರ್ ಹೇಳಿದರು. ಕಾರ್ಕಳ ಜ್ಞಾನಸುಧಾ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಶಿಕ್ಷಕರ ದಿನಾಚರಣೆಯ ಸಮಾರಂಭದಲ್ಲಿ ಮುಖ್ಯ ಅಭ್ಯಾಗತರಾಗಿ, ತಾಲೂಕಿನ ಐವರು ನಿವೃತ್ತ ಶಿಕ್ಷಕರನ್ನು ಸನ್ಮಾನಿಸಿ ಅವರು ಮಾತನಾಡಿದರು. ಇಂದು ಮಹಿಳೆ ಪುರುಷರಷ್ಟೆ ಸಮಾನವಾಗಿ ಬೆಳೆಯುತ್ತಿದ್ದಾಳೆ. ಅವಳ ಏಳಿಗೆಯಲ್ಲಿ ಪುರುಷ ಸಮಾಜದ ಪ್ರೋತ್ಸಾಹ ಇರುವುದನ್ನು ಅಲ್ಲಗಳೆಯುವಂತಿಲ್ಲ. ಹಿಂದೆ ಕೌಟುಂಬಿಕ ಸಂಬಂಧಗಳು ದೂರವಾಗದೆ ಎಲ್ಲರೊಂದಿಗೆ ಬೆರೆತು ಅನುಬಂಧಗಳಾಗಿದ್ದವು. ಇಂದು ಬದುಕು ಯಾಂತ್ರಿಕವಾಗಿ ಮೊಬೈಲ್ನಂತಹ ಮಾಧ್ಯಮಗಳಿಂದ ಸಂಬಂಧಗಳು ದೂರವಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಬೀಗಿದವರು ಅಳಿಯುವರು, ಬಾಗಿದವರು ಅಮರರಾಗುವವರು.
ವಿದ್ಯಾರ್ಥಿಗಳಿಗೆ, ತಮ್ಮ ತಂದೆ- ತಾಯಿಗಳನ್ನು ಗೌರವಿಸುತ್ತಾ, ಮಾನವೀಯ ಮೌಲ್ಯಗಳನ್ನು ತುಂಬಿಸುತ್ತಾ ಮಾದರಿಯಾಗುತ್ತಿರುವ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಡಾ.ಸುಧಾಕರ ಶೆಟ್ಟಿಯವರ ಕಾರ್ಯವು ಶ್ಲಾಘನೀಯ ಎಂದರು. ಇದೇ ಸಂದರ್ಭ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ಹಾಗೂ ಕಾರ್ಕಳ ಜ್ಞಾನಸುಧಾ ಪದವಿಪೂರ್ವಕಾಲೇಜಿನ ವತಿಯಿಂದ ನಿವೃತ್ತ ಮುಖ್ಯೋಪಾದ್ಯಾಯರುಗಳಾದ ಹಿರ್ಗಾನ ಬಿ.ಎಂ.ಅನುದಾನಿತ ಹಿ.ಪ್ರಾ.ಶಾಲೆಯ ಎಂ. ರತ್ನಾಕರ್ ರಾವ್, ದುರ್ಗಾತೆಳ್ಳಾರಿನ ಸ.ಹಿ.ಪ್ರಾ.ಶಾಲೆಯ ವಸಂತ್ ಎಂ. ಎಲಿಯಾಳ ಸ.ಹಿ.ಪ್ರಾ.ಶಾಲೆಯ ಸತೀಶ್ ರಾವ್ ಹಾಗೂ ಜೋಡುರಸ್ತೆಯ ದುರ್ಗಾ ಅನುದಾನಿತ ಹಿ.ಪ್ರಾ.ಶಾಲೆಯ ಸಹಶಿಕ್ಷಕ ಹರೀಶ್ ನಾಯ್ಕ್, ದುರ್ಗಾ ತೆಳ್ಳಾರಿನ ಸ.ಪ್ರೌ.ಶಾಲೆಯ ದೈಹಿಕ ಶಿಕ್ಷಕರಾದ ಎಚ್.ಕೆ.ಗಣಪ್ಪಯ್ಯ ಎಚ್.ಕೆ ಇವರನ್ನು ಗೌರವಿಸಲಾಯಿತು.
ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷರಾದ ಡಾ. ಸುಧಾಕರ್ ಶೆಟ್ಟಿಯವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಅಧಿಕಾರ, ಅಂತಸ್ತು, ಹಣವೆಲ್ಲ ಶಾಶ್ವತವಲ್ಲ. ಮನುಷ್ಯತ್ವವನ್ನು ಇಟ್ಟುಕ್ಕೊಳ್ಳದವನ ಬದುಕು ವ್ಯರ್ಥ. ನಾವು ನೀಡುವ ಉಪಕಾರ ಸ್ಮರಣೆಯೇ ಇಂತಹ ಸಮಾಜಮುಖಿಯಾದ ಗೌರವಿಸುವ ಕಾರ್ಯಕ್ರಮವಾಗಿದೆ. ಈ ಮೂಲಕ ಸುಂದರವಾದ ಬದುಕು ಅರ್ಥಪೂರ್ಣವಾಗಲು ಸಾಧ್ಯ ಎಂದರು. ಕ್ರೀಡಾ, ಶೈಕ್ಷಣಿಕ ಸಾಧಕ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸಲಾಯಿತು. ಸಂಸ್ಥೆಯ ಪಿ.ಆರ್.ಒ ಜ್ಯೋತಿ ಪದ್ಮನಾಭ ಭಂಡಿ ಸ್ವಾಗತಿಸಿ, ಆಂಗ್ಲಭಾಷಾ ಉಪನ್ಯಾಸಕಿ ಸಂಗೀತ ಕುಲಾಲ್ ನಿರೂಪಿಸಿ, ವಂದಿಸಿದರು.