ನವದೆಹಲಿ, ಸೆ. 5: ಸೆಪ್ಟೆಂಬರ್ 9 ರಂದು ನಿಗದಿಯಾಗಿದ್ದ ಜಿ 20 ಔತಣಕೂಟಕ್ಕೆ ಪ್ರೆಸಿಡೆಂಟ್ ಆಫ್ ಇಂಡಿಯಾ ಬದಲಿಗೆ ‘ಪ್ರೆಸಿಡೆಂಟ್ ಆಫ್ ಭಾರತ್’ ಹೆಸರಿನಲ್ಲಿಆಹ್ವಾನ ಪತ್ರವನ್ನು ರಾಷ್ಟ್ರಪತಿ ಭವನದಿಂದ ಕಳುಹಿಸಲಾಗಿದೆ.
ಆಸಿಯಾನ್-ಭಾರತ ಮತ್ತು ಪೂರ್ವ ಏಷ್ಯಾ ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 6 ಮತ್ತು 7 ರಂದು ಇಂಡೋನೇಷ್ಯಾದ ರಾಜಧಾನಿ ಜಕಾರ್ತಾಗೆ ಭೇಟಿ ನೀಡಲಿದ್ದಾರೆ. ಇದಕ್ಕೆ ಸಂಬಂಧಿಸಿದ ಆಮಂತ್ರಣದ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಇದರಲ್ಲೂ ಇಂಡಿಯಾ ಬದಲು ‘ದ ಪ್ರೈಮ್ ಮಿನಿಸ್ಟರ್ ಆಫ್ ಭಾರತ್’ ಎಂದು ಬರೆಯಲಾಗಿದೆ.
ಇಂಡಿಯಾ ಬದಲಿಗೆ ಇನ್ನು ಮುಂದೆ ಭಾರತ ಎಂದು ಕರೆಯಲಾಗುತ್ತದೆಯೇ? ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಈ ತಿಂಗಳ ಕೊನೆಯಲ್ಲಿ ನಡೆಯಲಿರುವ ವಿಶೇಷ ಸಂಸತ್ ಅಧಿವೇಶನದಲ್ಲಿ ದೇಶದ ಮರುನಾಮಕರಣದ ಬಗ್ಗೆ ನಿರ್ಣಯವನ್ನು ತರುವ ನಿರೀಕ್ಷೆಯಿದೆ. ಭಾರತ ಮರುನಾಮಕರಣದ ಬಗ್ಗೆ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳಿಂದ ಟೀಕೆ ವ್ಯಕ್ತವಾಗಿವೆ.