ಕಾಪು, ಆ. 31: ಸರಕಾರಿ ಪ್ರಥಮ ದರ್ಜೆ ಕಾಲೇಜು ಕಾಪು ಇದರ ದೈಹಿಕ ಶಿಕ್ಷಣ ವಿಭಾಗ ಮತ್ತು ಐಕ್ಯುಎಸಿ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಗಳಾಗಿ ಅಂತರಾಷ್ಟ್ರೀಯ ಮಾಸ್ಟರ್ ಅಥ್ಲೀಟ್ ಶಾಲಿನಿ ರಾಜೇಶ್ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಕ್ರೀಡೆಯಿಂದ ವಿದ್ಯಾರ್ಥಿಗಳು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಆಟ ಪಾಠವನ್ನು ಜೊತೆ ಜೊತೆಯಾಗಿ ಕೊಂಡೊಯ್ಯುದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯದ ಜೊತೆಗೆ ಉತ್ತಮ ಉದ್ಯೋಗಾವಕಾಶವನ್ನು ಸಹ ಪಡೆಯಬಹುದು ಎಂದರು.
ಪ್ರಾಂಶುಪಾಲ ಪ್ರೊ. ಗೋಪಾಲಕೃಷ್ಣ ಎಂ. ಗಾಂವ್ಕರ್, ಮಾತನಾಡಿ ಮೇಜರ್ ಧ್ಯಾನ್ ಚಂದ್ ಇವರ ಹಾಕಿ ಆಟ ದೇಶಪ್ರೇಮ ಹಾಗೂ ಸ್ವಾಭಿಮಾನದ ಬದುಕು ನಮ್ಮ ಯುವಜನತೆಗೆ ಸ್ಫೂರ್ತಿ. ವಿದ್ಯಾರ್ಥಿಗಳು ದೈಹಿಕ ಕ್ಷಮತೆ ಮತ್ತು ಆರೋಗ್ಯದ ಮೂಲಕ ಕ್ರೀಡೆಯಲ್ಲಿ ಸಂಪೂರ್ಣವಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು. ದೈಹಿಕ ಶಿಕ್ಷಣ ನಿರ್ದೇಶಕರಾದ ಸವಿತಾ, ಐಕ್ಯುಎಸಿ ಸಂಚಾಲಕರಾದ ಡಾ.ರೋಶ್ನಿ ಯಶವಂತ್, ಬೋಧಕ ಬೋಧಕೇತರರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.