ಬೆಂಗಳೂರು, ಆ. 26: ಚಂದ್ರಯಾನ-3 ಯಶಸ್ಸಿನಲ್ಲಿ ಮಹಿಳಾ ವಿಜ್ಞಾನಿಗಳ ಪಾತ್ರ ಪ್ರಮುಖವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ದಕ್ಷಿಣ ಆಫ್ರಿಕಾದಲ್ಲಿ ನಡೆದ ಬ್ರಿಕ್ಸ್ ಸಮ್ಮೇಳನದ ನಂತರ ನೇರವಾಗಿ ಶನಿವಾರ ಬೆಳಿಗ್ಗೆ ಬೆಂಗಳೂರಿನ ಎಚ್.ಎ.ಎಲ್ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ ನೇರವಾಗಿ ಇಸ್ರೋ ಟೆಲಿಮೆಟ್ರಿ ಟ್ರ್ಯಾಕಿಂಗ್ ಆಂಡ್ ಕಮಾಂಡ್ ನೆಟ್ವರ್ಕ್ ಮಿಷನ್ ಕಂಟ್ರೋಲ್ ಕಾಂಪ್ಲೆಕ್ಸ್ ಗೆ ತೆರಳಿ ವಿಜ್ಞಾನಿಗಳನ್ನು ಅಭಿನಂದಿಸಿ ಮಹಿಳಾ ವಿಜ್ಞಾನಿಗಳ ಜೊತೆಗೆ ಸಂವಾದ ನಡೆಸಿ ಮಾತನಾಡಿದರು.
ಚಂದ್ರಯಾನ 3 ಲ್ಯಾಂಡ್ ಆದ ಸ್ಥಳವನ್ನು (ಚಂದ್ರನ ದಕ್ಷಿಣ ಧ್ರುವದ ಮೇಲೆ ವಿಕ್ರಮ್ ಲ್ಯಾಂಡರ್ ಇಳಿದ ಸ್ಥಳ) ‘ಶಿವಶಕ್ತಿ’ ಎಂದು ಕರೆಯಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದರು. ಮುಂದಿನ ಜನಾಂಗಕ್ಕೆ ‘ಶಿವಶಕ್ತಿ’ ಸ್ಥಳ ಇನ್ನಷ್ಟು ಸಂಶೋಧನೆ ಮಾಡಿ ವಿಜ್ಞಾನವನ್ನು ಜನರ ಕಲ್ಯಾಣಕ್ಕಾಗಿ ಬಳಸುವಲ್ಲಿ ಪ್ರೇರಣೆಯಾಗಲಿದೆ. ಚಂದ್ರಯಾನ 2 ತನ್ನ ಹೆಜ್ಜೆಗುರುತುಗಳನ್ನು ಇಟ್ಟ ಸ್ಥಳವನ್ನು ‘ತಿರಂಗಾ’ ಎಂದು ಕರೆಯಲಾಗುವುದು ಎಂದು ಪ್ರಧಾನಿ ಘೋಷಿಸಿದರು.
ಇದೊಂದು ಅಭೂತಪೂರ್ವ ಸಾಧನೆಯಾಗಿದೆ. ಈ ಸಾಧನೆಯ ಹಿಂದೆ ಹೆಮ್ಮೆಯ ವಿಜ್ಞಾನಿಗಳ ಅವಿರತ ಮತ್ತು ಪ್ರಾಮಾಣಿಕ ಪ್ರಯತ್ನ ಮತ್ತು ಸಮರ್ಪಣಾ ಭಾವವಿದೆ. ಭಾರತ ಹೊಸ ಎತ್ತರಕ್ಕೆ ಏರುವಲ್ಲಿ ವಿಜ್ಞಾನಿಗಳು ಇಂಧನ ನೀಡಿದ್ದಾರೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ವೈಜ್ಞಾನಿಕ ಪರಾಕ್ರಮಕ್ಕೆ ಬಲವಾದ ಸಾಕ್ಷಿಯೇ ಚಂದ್ರಯಾನ-3. ಚಂದ್ರಯಾನದ ಮೂಲಕ ಭಾರತ ಜಗತ್ತಿಗೆ ಬೆಳಕು ನೀಡಿದೆ. ನಾನು ದಕ್ಷಿಣ ಆಫ್ರಿಕಾದಲ್ಲಿ ಮತ್ತು ನಂತರ ಗ್ರೀಸ್ನಲ್ಲಿದ್ದೆ, ಆದರೆ ನನ್ನ ಆಲೋಚನೆಗಳು ನಿಮ್ಮೊಂದಿಗೆ (ವಿಜ್ಞಾನಿಗಳು) ಇದ್ದವು ಎಂದು ಹೇಳಿದರು.
ಈ ಹಿಂದೆ ಯಾರೂ ಹೋಗದ ಸ್ಥಳಕ್ಕೆ ನೀವು (ವಿಜ್ಞಾನಿಗಳು) ನಮ್ಮನ್ನು ಕರೆದೊಯ್ದಿದ್ದೀರಿ. ಇದು ಇಂದಿನ ಭಾರತ. ಇದು ಹೊಸ ಮತ್ತು ನವೀನ ಆಲೋಚನೆಗಳಿಂದ ತುಂಬಿದ ಭಾರತ. ನಮ್ಮ ಆಲೋಚನೆ ಬದಲಾಗಿದೆ. ಕತ್ತಲೆಯಿಂದ ಕೂಡಿದ ಚಂದ್ರನ ಸ್ಥಳದಿಂದ (ದಕ್ಷಿಣ ಧ್ರುವ) ಭಾರತ ಜಗತ್ತಿಗೆ ಭರವಸೆ ನೀಡುತ್ತಿದೆ. ಜಗತ್ತು 21ನೇ ಶತಮಾನದಲ್ಲಿ ಎದುರಿಸುತ್ತಿರುವ ಅತ್ಯಂತ ಕ್ಲಿಷ್ಠಕರ ಸವಾಲುಗಳಿಗೆ ಭಾರತ ಪರಿಹಾರ ಒದಗಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಭವ್ಯ ಸ್ವಾಗತ: ಎಚ್.ಎ.ಎಲ್ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ ಅಲ್ಲಿ ಕಿಕ್ಕಿರಿದು ನೆರೆದಿದ್ದ ಜನರತ್ತ ಕೈ ಬೀಸಿ ಜೈ ವಿಜ್ಞಾನ್, ಜೈ ಅನುಸಂಧಾನ್ (ಸಂಶೋಧನೆ) ಘೋಷಣೆ ಹಾಕಿದರು. ವಿಮಾನ ನಿಲ್ದಾಣದಿಂದ ಇಸ್ರೋ ಕಛೇರಿಯವರೆಗೆ ರಸ್ತೆಯ ಇಕ್ಕೆಲಗಳಲ್ಲಿ ಬೃಹತ್ ಸಂಖ್ಯೆಯಲ್ಲಿ ತ್ರಿವರ್ಣ ಧ್ವಜಗಳನ್ನು ಹಿಡಿದು ಜನರು ಪ್ರಧಾನಿಯನ್ನು ಸ್ವಾಗತಿಸಿದರು.
ಇಸ್ರೋ ಮುಖ್ಯಸ್ಥ ಎಸ್. ಸೋಮನಾಥ್ ಪ್ರಧಾನಿ ನರೇಂದ್ರ ಮೋದಿಯವರಿಗೆ ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್ ನಿಂದ ಪ್ರಗ್ಯಾನ್ ರೋವರ್ ಇಳಿಯುತ್ತಿದ್ದ ಚಿತ್ರವನ್ನು ಸ್ಮರಣಿಕೆಯ ರೂಪದಲ್ಲಿ ನೀಡಿ ಗೌರವಿಸಿದರು.