ಕಾಪು, ಆ. 25: ಪದವಿ ಪ್ರಮಾಣಪತ್ರ ಹಾಗೂ ಅಂಕಗಳು ಕೇವಲ ಕನಿಷ್ಠ ಅರ್ಹತೆಗಳು, ಆದರೆ ಇಂದಿನ ಉದ್ಯೋಗ ಮಾರುಕಟ್ಟೆ ನಿರೀಕ್ಷಿಸುವುದು ನೇಮಕ ಯೋಗ್ಯತೆಯನ್ನು ಎಂದು ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಇಲ್ಲಿನ ಸಮಾಜಕಾರ್ಯ ವಿಭಾಗ ಮುಖ್ಯಸ್ಥ ಡಾ. ದುಗ್ಗಪ್ಪ ಕಜೆಕಾರ್ ಹೇಳಿದರು. ಅವರು ಸರಕಾರಿ ಪ್ರಥಮ ದರ್ಜೆ ಕಾಲೇಜು ಕಾಪು ಇಲ್ಲಿ ಶುಕ್ರವಾರ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳ ಅಭಿವಿನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಕೌಶಲ್ಯ ಸಿದ್ಧವಸ್ತುಗಳಾಗಿ ಸಿಗುವುದಿಲ್ಲ. ಅದು ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಾಗಿ ಆಯೋಜಿಸುವ ಎನ್.ಎಸ್.ಎಸ್., ಸಾಂಸ್ಕೃತಿಕ ಸ್ಪರ್ಧೆಗಳು, ಕ್ರೀಡಾ ಸ್ಪರ್ಧೆಗಳಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ಬರುತ್ತದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಪ್ರೊ. ಗೋಪಾಲಕೃಷ್ಣ ಎಂ. ಗಾಂವ್ಕರ್, ವಿದ್ಯಾರ್ಥಿಗಳು ಕಾಲೇಜಿನ ಕ್ಯಾಂಪಸ್ ಶಿಸ್ತಿಗೆ ಒತ್ತು ನೀಡಬೇಕು. ವಿದ್ಯಾರ್ಥಿಗಳ ಸಾಧನೆ ಕಾಲೇಜಿನ ಘನತೆಯನ್ನು ಹೆಚ್ಚಿಸುತ್ತದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕಾರ್ಯಪ್ರವೃತ್ತರಾಗಬೇಕು ಎಂದರು. ಐಕ್ಯೂಎಸಿ ಸಂಯೋಜಕರಾದ ಡಾ. ರೋಶನಿ ಯಶವಂತ್, ಎಲ್ಲಾ ವಿಭಾಗ ಮುಖ್ಯಸ್ಥರು, ಬೋಧಕ ಬೋಧಕೇತರರು ಉಪಸ್ಥಿತರಿದ್ದರು.