ಮಲ್ಪೆ, ಆ.13: ಸ್ಟೆಲ್ಲಾ ಮಾರಿಸ್ ಚರ್ಚ್ ಕಲ್ಮಾಡಿ ಇಲ್ಲಿರುವ ವೆಲಂಕಣಿ ಮಾತೆಯ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವದ ಪ್ರಯುಕ್ತ ವೆಲಂಕಣಿ ಮಾತೆಯ ಮೂರ್ತಿಯ ಮೆರವಣಗೆಯು ಆದಿಉಡುಪಿಯಿಂದ ಕಲ್ಮಾಡಿ ಚರ್ಚಿನವರೆಗೆ ನಡೆಯಿತು. ಪುಣ್ಯಕ್ಷೇತ್ರದ ರೆಕ್ಟರ್ ವಂದನೀಯ ಬ್ಯಾಪ್ಟಿಸ್ಟ್ ಮಿನೇಜಸ್ ರವರು ಧರ್ಮಾಧ್ಯಕ್ಷರಿಗೆ ಹಾಗೂ ನೆರೆದ ಭಕ್ತಾದಿಗಳಿಗೆ ಸ್ವಾಗತ ಕೋರಿದರು. ಮಿಲಾಗ್ರಿಸ್ ಚರ್ಚಿ ಕಲ್ಯಾಣ್ಪುರ ಇಲ್ಲಿನ ಸಹ ಗುರುಗಳಾದ ವಂದನೀಯ ಜೋಯ್ ಅಂದ್ರಾದೆ ಅವರು ದೇವರ ವಾಚನವನ್ನು ಓದಿ ಸಂದೇಶ ನೀಡಿದರು. ಮಂಗಳೂರು ಧರ್ಮಪ್ರಾಂತ್ಯದ ನಿವೃತ್ತ ಧರ್ಮಾಧ್ಯಕ್ಷರಾದ ಅತೀ ವಂದನೀಯ ಡಾ| ಅಲೋಷಿಯಸ್ ಪಾವ್ಲ್ ಡಿ’ಸೋಜಾ ರವರು ವೆಲಂಕಣಿ ಮಾತೆಯ ಮೂರ್ತಿಯನ್ನು ಆಶೀರ್ವದಿಸಿ ಮೆರವಣಿಗೆಗೆ
ಚಾಲನೆ ನೀಡಿದರು. ಶೋಭ ಮೆಂಡೋನ್ನರವರು ಕಾರ್ಯಕ್ರಮವನ್ನು ನಡೆಸಿದರು.
ತದನಂತರ ನಡೆದ ಬಲಿಪೂಜೆಯನ್ನು ಮಂಗಳೂರು ಧರ್ಮಪ್ರಾಂತ್ಯದ ನಿವೃತ್ತ ಧರ್ಮಾಧ್ಯಕ್ಷರಾದ ಅತೀ ವಂದನೀಯ ಡಾ| ಅಲೋಷಿಯಸ್ ಪಾವ್ಲ್ ಡಿ’ಸೋಜಾ ರವರು ಆಚರಿಸಿದರು. ಅವರು ತಮ್ಮ ಸಂದೇಶದಲ್ಲಿ, ದೇವರು ನಮ್ಮೊಂದಿಗೆ ಸಂವಾದಿಸಲು ಆಶಿಸುತ್ತಾರೆ ಆದರೆ ನಾವು ಪೂರಕವಾದ ವಾತಾವರಣವನ್ನು ಕಲ್ಪಿಸುತ್ತಿಲ್ಲ, ಜಗತ್ತಿನ ಗದ್ದಲದಲ್ಲಿ ದೇವರ ಮಾತು ಕೇಳಿಸುತ್ತಿಲ್ಲ. ಮಾತೆ ಮರಿಯಮ್ಮನವರು ಸದಾ ದೇವರ ಇಚ್ಚೆಯಂತೆ ನಡೆದವರು. ಪ್ರೀತಿಯ ತಾಯಿಯಾಗಿ, ವಿಶ್ವಾಸಿ ಮಡದಿಯಾಗಿ ಮತ್ತು ದುಖ:ತೃಪ್ತ ಕನ್ಯೆಯಾಗಿ ದೇವರ ಇಚ್ಚೆಯಂತೆ ಜೀವನ ನಡೆಸಿದರು ಎಂದರು.
ವೆಲಂಕಣಿ ಮಾತೆಯ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವವು ಅಗೋಸ್ಟ್ 15 ರಂದು ನಡೆಯಲಿರುವುದು. ಆ ದಿನ ಬೆಳಗ್ಗೆ 10 ಗಂಟೆಗೆ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಡಾ. ಜೆರಾಲ್ಡ್ ಐಸಾಕ್ ಲೊಬೋ ರವರು ಬಲಿಪೂಜೆಯನ್ನು ನೆರೆವೇರಿಸಲಿರುವರು. ಅಂದು ಮಧ್ಯಾಹ್ನ 2 ಗಂಟೆಗೆ ಸಾಯಂಕಲ 4 ಗಂಟೆಗೆ ಹಾಗೂ 6 ಗಂಟೆಗೆ ಇತರ ಬಲಿಪೂಜೆಗಳು ನಡೆಯಲಿವೆ.