ಉಡುಪಿ, ಆ.11: ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ಲಿ. ಉಡುಪಿ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಅವಿರೋಧವಾಗಿ ಪುನರಾಯ್ಕೆಯಾಗಿದ್ದಾರೆ. ಬ್ಯಾಂಕಿನ 2023-28 ನೇ ಸಾಲಿನ 5 ವರ್ಷಗಳ ಅವಧಿಯ ಅಡಳಿತ ಮಂಡಳಿಗೆ ಎಲ್ಲಾ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದು, ಬ್ಯಾಂಕಿನ ಉಪಾಧ್ಯಕ್ಷರಾಗಿ ವಾಸುದೇವ ಸಾಲ್ಯಾನ್, ನಿರ್ದೇಶಕರಾಗಿ ಕೆ ಸಂಜೀವ ಶ್ರೀಯಾನ್, ವೆಂಕಟರಮಣ ಕಿದಿಯೂರು, ಶಶಿಕಾಂತ ಬಿ ಕೋಟ್ಯಾನ್, ಶೋಭೇಂದ್ರ, ವಿನಯ ಕರ್ಕೇರ, ನಾರಾಯಣ ಟಿ ಅಮೀನ್, ರಾಮ ನಾಯ್ಕ್ ಎಚ್, ಶಿವರಾಮ ಕುಂದರ್, ಸುರೇಶ ಬಿ ಕರ್ಕೇರ, ಸದಾನಂದ ಬಳ್ಕೂರು, ವನಜ ಹೆಚ್ ಕಿದಿಯೂರು, ವನಜ ಜೆ ಪುತ್ರನ್, ಮನೋಜ್ ಆಯ್ಕೆಯಾಗಿದ್ದಾರೆ.
ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 8 ಶಾಖೆಗಳ ಮೂಲಕ ವ್ಯವಹಾರ ನಡೆಸುತ್ತಿದ್ದು, 2022-23 ನೇ ಸಾಲಿನಲ್ಲಿ ಬ್ಯಾಂಕ್ 9,464 ಕೋಟಿ ವಾರ್ಷಿಕ ವಹಿವಾಟು ನಡೆಸಿದ್ದು, ಕಳೆದ 14 ವರ್ಷಗಳಿಂದ ನಿರಂತರವಾಗಿ ಸದಸ್ಯರಿಗೆ ಶೇಕಡಾ 18% ಡಿವಿಡೆಂಡ್ ನೀಡುವ ಕರಾವಳಿ ಕರ್ನಾಟಕದ ಏಕೈಕ ಪಟ್ಟಣ ಸಹಕಾರ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
2008 ರಿಂದ ಬ್ಯಾಂಕಿನ ನಿರ್ದೇಶಕರಾಗಿ ನಿರಂತರವಾಗಿ ಸೇವೆ ಸಲ್ಲಿಸಿರುವ ಯಶ್ಪಾಲ್ ಸುವರ್ಣ 2018 ರಲ್ಲಿ ಬ್ಯಾಂಕಿನ ಅಧ್ಯಕ್ಷರಾಗಿ ಸಂಸ್ಥೆಯ ಸಾರಥ್ಯ ವಹಿಸಿ ಬ್ಯಾಂಕ್ ಸರ್ವಾಂಗೀಣ ಪ್ರಗತಿ ಸಾಧಿಸುವಲ್ಲಿ ಪ್ರಮುಖ ಪಾತ್ರವಹಿಸಿ ಇದೀಗ ಮತ್ತೊಮ್ಮೆ ಬ್ಯಾಂಕಿನ ಅಧ್ಯಕ್ಷರಾಗಿ ಸಂಸ್ಥೆಯನ್ನು ಮುನ್ನಡೆಸಲಿದ್ದಾರೆ. 2014 ರಿಂದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಹಕಾರಿ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷರಾಗಿ, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕರಾಗಿ, ಹಲವಾರು ಸಹಕಾರಿ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿರುವ ಯಶ್ಪಾಲ್ ಸುವರ್ಣ ತಮ್ಮ ಸಹಕಾರ ಕ್ಷೇತ್ರದ ಸಾಧನೆಗಾಗಿ 69ನೇ ಅಖಿಲ ಭಾರತ ಸಹಕಾರ ಸಪ್ತಾಹದಲ್ಲಿ 2022 ನೇ ಸಾಲಿನ ಸಹಕಾರ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿ ಸಹಕಾರ ರತ್ನ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
ಭಾರತೀಯ ಜನತಾ ಪಾರ್ಟಿಯ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ, ಉಡುಪಿ ವಿಧಾನ ಸಭಾ ಕ್ಷೇತ್ರದ ಶಾಸಕರಾಗಿ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಮೀನುಗಾರಿಕೆ ಕ್ಷೇತ್ರದಲ್ಲಿ ತಮ್ಮ ಕಾರ್ಯವೈಖರಿಯಿಂದ ಗುರುತಿಸಿಕೊಂಡಿದ್ದಾರೆ.