ಈ ವರ್ಷ ಮಗನ ಎಸ್‍ಎಸ್‍ಎಲ್‍ಸಿ ಹಾಗೂ ಮಗಳ ಪಿಯುಸಿ ಪರೀಕ್ಷೆ ಆದ ಮೇಲೆ ಮೂರು ವರ್ಷದ ಬಳಿಕ ಪ್ರವಾಸಕ್ಕೆ ಹೊರಟೆವು. ಈ ಬಾರಿ ನಾವು ಆಯ್ದುಕೊಂಡ ರಾಜ್ಯ ಒಡಿಶಾ. ಒಡಿಶಾ ಹೇಳಿದ ತಕ್ಷಣ ನೆನಪು ಬರುವುದು ವಿಶ್ವ ಪ್ರಸಿದ್ಧ ಜಗನ್ನಾಥ ಪೂರಿ ಹಾಗೂ ಕೋನಾರ್ಕಿನ ಸೂರ್ಯ ದೇವಸ್ಥಾನ.
ನಾವು ಮಂಗಳೂರಿನಿಂದ ಭುವನೇಶ್ವರ ಫ್ಲೈಟ್ ನಲ್ಲಿ ಹಾಗೂ ಭುವನೇಶ್ವರದಿಂದ ಪೂರಿಗೆ ಟ್ಯಾಕ್ಸಿ ಮಾಡಿಕೊಂಡು ತಲುಪಿದೆವು. ಪುರಿಯಿಂದ ಸಾಧಾರಣ 35km ದೂರದಲ್ಲಿರುವ ಕೋನಾರ್ಕಗೆ ಬಸ್ಸಿನಲ್ಲಿ ಪ್ರಯಾಣ ಮಾಡಿದೆವು. ಬಸ್ಸಿನಿಂದ ಕೆಳಗೆ ಇಳಿದು ಕೋನಾರ್ಕ್ ಸೂರ್ಯ ದೇವಸ್ಥಾನ ಹೋಗಲಿಕ್ಕೆ ಟಿಕೆಟ್ ತೆಗೆದು ಕೊಂಡು ಹೊರಗೆ ಬರುವಾಗ ಗೈಡ್ ಒಬ್ಬರು ಬಂದು ಅವರ ಅವಶ್ಯಕತೆ ಇದೆಯೇ ಎಂದು ಕೇಳಿದಾಗ ನಾನು ಹೌದು ಎಂದು ಉತ್ತರಿಸಿದೆ. ದೇಗುಲವು ಸೂರ್ಯ ದೇವರಿಗೆ ಸಮರ್ಪಿತವಾಗಿದೆ. 1984ರಲ್ಲಿ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿ ಗುರುತಿಸಿದ್ದಾರೆ. ಯಾವುದೇ ಐತಿಹಾಸಿಕ ಪ್ರದೇಶವನ್ನು ವೀಕ್ಷಿಸಲು ಹೋದಾಗ ಗೈಡ್ ಅನ್ನು ಕರ್ಕೊಂಡು ಹೋಗಿ. ಏಕೆಂದರೆ ಅವರು ಆ ಜಾಗದ ಮಹತ್ವ, ಕಥೆ, ಇತಿಹಾಸವನ್ನೆಲ್ಲ ತಿಳಿಸುತ್ತಾರೆ. ನಮಗೆ ಅದನ್ನು ತಿಳಿಯುವ ಕುತೂಹಲವಿರಬೇಕು ಇಲ್ಲವಾದಲ್ಲಿ ಹೋಗಿ ನೋಡಿ ಬಂದರೆ ಏನು ಪ್ರಯೋಜನವಾಗುವುದಿಲ್ಲ.
ಕೊನಾರ್ಕ್ ಸೂರ್ಯ ದೇವಸ್ಥಾನ ಒಂದು ಬೃಹತ್ ಸೂರ್ಯದೇವನ ರಥವನ್ನು ಬಿಂಬಿಸುತ್ತದೆ. ಅದರಲ್ಲಿ 24 ಚಕ್ರಗಳು ಇವೆ. ಚಕ್ರವು ಸಮಯವನ್ನು ಸೂಚಿಸುತ್ತದೆ ಆದರೆ ಉಲ್ಟಾ ಸಮಯ ಅಂದರೆ ಆಂಟಿ ಕ್ಲಾಕ್ ವೈಸ್ ವಿರುವುದು. ಬೇರೆ ಬೇರೆ ಅದ್ಭುತ ಶಿಲ್ಪ ಕಲೆಯನ್ನು ಇಲ್ಲಿ ನೋಡಬಹುದು. ನರ್ತಕೀಯರು, ಶಿಲಾಬಾಲಿಕೆಯರು,ಪ್ರಾಣಿ, ಪಕ್ಷಿಗಳನ್ನು ಅಮೋಘ ರೀತಿಯಲ್ಲಿ ಕೆತ್ತನೆ ಮಾಡಿದ್ದಾರೆ. ನೋಡಲು ಅತ್ಯಾಕರ್ಷಕವಾಗಿದೆ. ಮೆಟ್ಟಲನ್ನು ಹತ್ತಿ ಹೋಗಲು ಅವಕಾಶವಿಲ್ಲ. ಮುಂಚೆ ಬಿಡುತ್ತಿದ್ದರಂತೆ ಆದರೆ ಈಗ ಅದರ ರಕ್ಷಣೆ ಗೋಸ್ಕರ ಅಲ್ಲಿ ಪ್ರವೇಶವಿಲ್ಲ. ಹೊರಗಿನಿಂದ ಸುತ್ತು ಮಾತ್ರ ನೋಡಲು ಬಿಡುತ್ತಾರೆ.ಮೇಲೆ ದೇವಸ್ಥಾನದ ಒಳಗೆ ಉಸುಕನ್ನು ತುಂಬಿದ್ದಾರೆ. ಇಲ್ಲವಾದಲ್ಲಿ ಬೀಳಬಹುದು ಎನ್ನುವ ದೃಷ್ಟಿಯಿಂದ.
ಈ ದೇವಸ್ಥಾನವನ್ನು ಕಟ್ಟಿದ್ದು ಸಾಧಾರಣ 13ನೆಯ ಶತಮಾನದಲ್ಲಿ. ಅದು ಇನ್ನೂ ದೊಡ್ಡದಾಗಿತ್ತು ಎನ್ನಲಾಗಿದೆ. ಅದರ ಕಥೆ ಹೀಗಿದೆ. ಚೀಫ್ ಆರ್ಕಿಟೆಕ್ಟ್ ಆಗಿದ್ದ ಬಿಶು ಮಹಾರಾಜಾರು ಮಣ್ಣಿನ ಗುಣವನ್ನು ನೋಡಿ ಕಟ್ಟಲು ಕಷ್ಟವೆಂದು ತಿಳಿದಿದ್ದನು. ಆದರೆ ಈ ಜಾಗ ದೇವಸ್ಥಾನ ಕಟ್ಟಲು ಅತ್ಯುತ್ತಮ ಜಾಗವಾದ್ದರಿಂದ ರಾಜನ ಆದೇಶದಂತೆ ಅದನ್ನು ಕಟ್ಟಲು ಪ್ರಾರಂಭಿಸಿದರು.
1500 ಕೆಲಸಗಾರರು ಕೆಲಸ ಮಾಡಿದ್ದರು. ರಾಜ ಹಾಗೂ ಕೆಲಸಗಾರರ ಮಧ್ಯೆ ಒಂದು ಒಪ್ಪಂದವಾಗಿತ್ತು .ಅದೇನೆಂದರೆ 12 ವರ್ಷ ಸಮಯದ ಒಳಗೆ ಅದನ್ನು ಕಟ್ಟಬೇಕು ಇಲ್ಲವಾದಲ್ಲಿ ಎಲ್ಲಾ 1500 ಕೂಲಿಗಳ ತಲೆಯನ್ನು ಕಡಿಯುದಾಗಿ ಒಪ್ಪಂದವಾಗಿತ್ತು. ತಿಳಿಸಿದ ಸಮಯದ ಪ್ರಕಾರ ದೇವಸ್ಥಾನ ಕಟ್ಟಲಾಗಿತ್ತು. ಆದರೆ ಕೊನೆಯ ದಿನ ಕಲಶ ಸ್ಥಾಪನೆವಾಗ್ತಾ ಇರಲಿಲ್ಲ. ಆಗ ಚೀಫ್ ಆರ್ಕಿಟೆಕ್ಟ್ ನಮಗ ಧರ್ಮಪಾದ ತಂದೆಯನ್ನು ನೋಡಲು ಬಂದನು. ವಿಷಯ ತಿಳಿದ ಮಗ ಕೂಡಲೇ ಮೇಲೆ ಹತ್ತಿ ಅದನ್ನು ಸರಿ ಮಾಡಿ ಕಲಶವನ್ನು ಸ್ಥಾಪಿಸಿದನು. ಆದರೆ ಕೂಲಿಗಳು ತಾವು ಮಾಡಿದ ಕೆಲಸ ಹುಡುಗ ಮಾಡಿದನೆಂದು ಗೊತ್ತಾದರೆ ರಾಜನು ಅವರಿಗೆ ಶಿಕ್ಷೆ ಕೊಡುವುದು ತಪ್ಪಿಸುವುದಿಲ್ಲ ಎಂದು ಬೇಸರದಲ್ಲಿದ್ದರು. ಇದನ್ನು ತಿಳಿದ ಮಗ ಅಲ್ಲಿಂದ ಸಾವಿರದ ಐನೂರು ಕೂಲಿಗಳು ಸಾಯುವುದು ಬೇಡವೆಂದು ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ನಂತರ ವಿಜೃಂಭಣೆಯಿಂದ ದೇವಸ್ಥಾನ ಸ್ಥಾಪನೆಯಾಯಿತು. ಆದರೆ ಸ್ವಲ್ಪ ದಿನದಲ್ಲಿ ಕೆಲವು ಭಾಗಗಳು ಬೀಳಲು ಶುರುವಾದವು. ಈಗಲೂ ಕೂಡ ಚಿಕ್ಕ ಚಿಕ್ಕ ಕಣಗಳು ಬೀಳುತ್ತವಂತೆ ಎಂದು ಗೈಡ್ ನಮಗೆ ತಿಳಿಸಿದರು. ಮುಂದೆನಾಯಿತು ಎಂಬುದು ಸರಿಯಾದ ಮಾಹಿತಿ ಇಲ್ಲ.
ಈ ಕಥೆಯನ್ನು ಕೇಳಿದಾಗ ನನಗೆ ಆ ಹುಡುಗನ ಬಗ್ಗೆ ಅಯ್ಯೋ ಅನಿಸಿತು. ತನ್ನ ಜೀವವನ್ನೇ ತ್ಯಾಗ ಮಾಡಿದನಲ್ಲವೆಂದು. ಈ ಎಲ್ಲದಕ್ಕೂ ಕಾರಣ ರಾಜನ ಆದೇಶವೆನಿಸಿತು. ಅಷ್ಟು ಸುಂದರವಾದ ಕೆತ್ತನೆ ಶಿಲ್ಪಕಲೆಯ ಭಂಡಾರವದು. ಒಪ್ಪಂದದ ಪ್ರಕಾರ ಪೂರ್ತಿ ಆಗದಿದ್ದರೆ ಏನಾಗುತ್ತಿತ್ತು. ಅದ್ಭುತ ದೇವಸ್ಥಾನ ಕಟ್ಟಿದ ಕಾರ್ಮಿಕರನ್ನು ಕೊಲ್ಲಲು ಮನಸ್ಸು ಹೇಗೆ ಬರುವುದು. ರಾಜ ಅನ್ನುವ ಮಾತ್ರಕ್ಕೆ ಜನರ ಪ್ರಾಣದ ಬೆಲೆ ಇಲ್ಲವೇ. ಧರ್ಮ ಪಾದದ ಜೀವ ತ್ಯಾಗದಿಂದ ಆ ಎಲ್ಲಾ ಕಾರ್ಮಿಕರು ಉಳಿದರು. ಬೇಗ ನಿರ್ಮಾಣವಾಗಬೇಕೆನ್ನುವ ಉದ್ದೇಶವಿಟ್ಟುಕೊಂಡು ಒಪ್ಪಂದ ಮಾಡಿದರೂ ಕೂಡ ಅಷ್ಟೂ ಜನರನ್ನು ಕೊಲ್ಲುವುದೆಂದರೆ. ಈಗ ಈ ಆಲೋಚನೆ ಮಾಡಿ ಏನಾಗಬೇಕಿದೆ. ಈಗ ಉಳಿದದ್ದನ್ನು ನಾವು ನೋಡುತ್ತಿದ್ದೇವೆ ಅಷ್ಟೇ. ಪಕ್ಕದಲ್ಲಿ ಹೊಸದಾದ ಸುಂದರ ಕೋನಾರ್ಕ ಮ್ಯೂಸಿಯಂ ಇದೆ.ನೋಡಲು ಮರಿಯಬೇಡಿ. ಊಟ ತಿಂಡಿಯ ವ್ಯವಸ್ಥೆಗೆ ಹೋಟೆಲು ಇದೆ. ನಾವು ಎಲ್ಲವನ್ನು ವೀಕ್ಷಿಸಿ ನಂತರ ಊಟ ಮಾಡಿ ಊರಿಗೆ ವಾಪಸ್ ಹೊರಟೆವು.
-ಡಾ. ಹರ್ಷಾ ಕಾಮತ್