ಉಡುಪಿ, ಆ. 4: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ, ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಹಾಗೂ ಶ್ರೀ ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರಥಮ ದರ್ಜೆ ಕಾಲೇಜು ಕಾರ್ಕಳ, ರಾಷ್ಟ್ರೀಯ ಸೇವಾ ಯೋಜನೆ ಘಟಕ 1 ಮತ್ತು 2 ಇವರ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಅಂಗಾಂಗ ದಾನ ದಿನಾಚರಣೆ ಮತ್ತು ಅಂಗದಾನ ಮಹೋತ್ಸವ ದಿನಾಚರಣೆಯು ಗುರುವಾರ ಕಾರ್ಕಳದ ಶ್ರೀ ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಿತು.
ನಿಟ್ಟೆ ಸಮುದಾಯ ಆರೋಗ್ಯ ಕೇಂದ್ರದ ವೈದ್ಯ ಡಾ. ಸಂದೀಪ್ ಕುಡ್ವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅಂಗಾಂಗ ದಾನಿಗಳನ್ನು ಸ್ಮರಿಸಲು ಹಾಗೂ ಅಂಗಾಂಗ ದಾನದ ಬಗ್ಗೆ ಜಾಗೃತಿ ಮೂಡಿಸಲು ಆಗಸ್ಟ್ 3 ರಂದು ಭಾರತೀಯ ಅಂಗದಾನ ದಿನವನ್ನಾಗಿ ಆಚರಿಸಲಾಗುತ್ತಿದೆ. ಒಬ್ಬ ಅಂಗಾಂಗ ದಾನಿಯು 8 ಜೀವಗಳನ್ನು ಉಳಿಸಬಹುದು. ಅಂಗಾಂಗದಾನ ಮಾಡಲು ಹಾಗೂ ಪಡೆಯಲು ವಯಸ್ಸಿನ ಮಿತಿ ಇಲ್ಲ. ಮರಣಾನಂತರ ನಿರ್ದಿಷ್ಠ ಸಮಯದವರೆಗೆ ಹೃದಯ, ಮೂತ್ರಪಿಂಡ, ಯಕೃತ್, ಕರುಳು, ಶ್ವಾಸಕೋಶ, ಮೇದೋಜೀರಕ ಗ್ರಂಥಿ ದಾನ ಪಡೆದು ನಿಗದಿತ ಸಮಯದೊಳಗೆ ಕಸಿ ಮಾಡಬಹುದು. ಅಂಗಾಂಗ ಕಸಿಗಾಗಿ ಕಾಯುತ್ತಿರುವ ಜನರಲ್ಲಿ ಶೇ.60 ರಷ್ಟು ಯುವಜನರೇ ಇದ್ದಾರೆ ಎಂದರು. ವಿದ್ಯಾರ್ಥಿ ಕ್ಷೇಮ ಪಾಲನಾ ಅಧಿಕಾರಿ ಡಾ.ವಿದ್ಯಾಧರ್ ಹೆಗ್ಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಸುವರ್ಣ ಆರೋಗ್ಯ ಟ್ರಸ್ಟ್ ಸಂಯೋಜಕಿ ಡಾ. ತೇಜಸ್ವಿನಿ, ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜಕ ಪ್ರಸನ್ನ ಕುಮಾರ್, ಕಾಲೇಜಿನ ಪ್ರಾಂಶುಪಾಲ ಗಣೇಶ್, ಪ್ರಾಧ್ಯಾಪಕ ವೃಂದದವರು, ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕರು ಉಪಸ್ಥಿತರಿದ್ದರು. ಆರೋಗ್ಯ ಇಲಾಖೆಯ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಚಂದ್ರಕಲಾ ಪ್ರಸ್ತಾವಿಕವಾಗಿ ಮಾತನಾಡಿದರು. ರಾಷ್ಟ್ರೀಯ ಸೇವಾ ಯೋಜನೆಯ ರಕ್ಷಿತಾ ಶೆಟ್ಟಿ ನಿರೂಪಿಸಿ, ಪ್ರತಿಕ್ಷಾ, ಸಾಕ್ಷಿ ವಂದಿಸಿದರು.