ಉಡುಪಿ ಶೀಕೃಷ್ಣ ನಗರಿಯ ವಿದ್ಯಾ ದೇಗುಲದ ಶೌಚಾಲಯದಲ್ಲಿ ನಡೆದ ಪ್ರಸಂಗವನ್ನು ಕೇಳಿ ರಾಷ್ಟ್ರೀಯ ಮಹಿಳಾ ಆಯೇೂಗದ ಸದಸ್ಯೆ ರಾತ್ರಿ ಬೆಳಗಾಗುವುದರ ಒಳಗೆ ಉಡುಪಿ ಶ್ರೀ ಕೃಷ್ಣ ನಗರಿಯಲ್ಲಿ ಪ್ರತ್ಯಕ್ಷವಾಗಿಬಿಟ್ಟರು. ಇವರ ಪ್ರತ್ಯಕ್ಷತೆಯನ್ನು ನೇೂಡಿ ಕೆಲವರಿಗಂತು ಮನಸ್ಸಿನಲ್ಲಿ ಪ್ರಸನ್ನತೆ ಮೂಡಿ ಬಂದಿದ್ದೂ ನಿಜ. ಹೇಗೂ ಖುಷ್ಬು ನಮ್ಮವರೇ ಇವರ ಬರುವಿಕೆ ಇವರ ಹೇಳಿಕೆ ರಾಷ್ಟ್ರಮಟ್ಟದಲ್ಲಿ ಅತೀ ದೊಡ್ಡ ರಾಜಕೀಯ ಸಂಚಲನವನ್ನು ಮೂಡಿಸಬಹುದು ಅನ್ನುವ ಪ್ರಸನ್ನತೆ ಇವರ ಮುಖದಲ್ಲಿ ಇತ್ತು. ಆದರೆ ನಮ್ಮ ಖುಷ್ಬು ರಾಣಿ ಅವರು ಪತ್ರಿಕಾ ಮಾಧ್ಯಮಗಳ ಎದುರು ನಿಂತು ಹೇಳಿದ ನುಡಿಗಳನ್ನು ಕೇಳಿದ ಮೇಲೆ ಕೆಲವರಿಗಂತು ಒಮ್ಮೆಲೆ ತಲೆಯ ಮೇಲೆ ಸಿಡಿಲು ಬಡಿದ ಹಾಗೆ ಆಯಿತು. ಈ ಅಮ್ಮ ಒಮ್ಮೆಲೆ ಶಂಕರನ ಸತಿಯಾಗಿ ಕೈಲಾಸದಿಂದ ಧರೆಗೆ ಇಳಿದು ಬಂದರಾ? ಅಥವಾ ದೆಹಲಿಯ ಮಹಿಳಾ ಆಯೇೂಗದ ಸದಸ್ಯೆಯಾಗಿ ಪ್ರತ್ಯಕ್ಷರಾದರ ಅನ್ನುವ ಸಂಶಯ ಮೂಡಲು ಶುರುವಾಗಿರುವುದಂತು ಸತ್ಯ. ಅವರ ಮಾತುಗಳನ್ನು ಕೇಳುವಾಗಲೇ ನಮಗೆ ನ್ಯಾಯ ದೇವತೆ ಧರೆಗೆ ಇಳಿದು ಬಂದ ಹಾಗಿದೆ! “ಇಲ್ಲಿ ಏನೂ ನಡೆದಿಲ್ಲ ಇದು ವಿದ್ಯಾ ದೇಗುಲ ಎಲ್ಲವನ್ನು ಆಡಳಿತ ಮಂಡಳಿ ಪೊಲೀಸ್ ಇಲಾಖೆ ಚೆನ್ನಾಗಿ ನಿಭಾಯಿಸುತ್ತಾರೆ, ಇದಕ್ಕೆ ಯಾವುದೆ ಧರ್ಮ ರಾಜಕೀಯ ಬಣ್ಣ ಬಳಿಯುವುದು ಬೇಡ. ತನಿಖೆ ಚೆನ್ನಾಗಿ ನಡೆಯುತ್ತಿದೆ, ನೀವು ಸ್ವಲ್ಪ ಶಾಂತಚಿತ್ತರಾಗಿ ಅನ್ನುವುದರ ಜೊತೆಗೂ ಒಂದಿಷ್ಟು ಹಿತೇೂಪದೇಶವನ್ನು ಸುದ್ದಿಗಾಗಿ ತುದಿಗಾಲಲ್ಲಿ ನಿಂತ ನಮ್ಮ ಸುದ್ದಿ ಮಾಧ್ಯಮದ ಸ್ನೇಹಿತರಿಗೂ ಹೇಳಿಬಿಟ್ಟರು. ಅಯ್ಯೇೂ ದೇವರೇ ಇಷ್ಟನ್ನು ಹೇಳಲು ನಾವು ನಮ್ಮ ಖುಷ್ಬು ಅಕ್ಕನನ್ನು ದೆಹಲಿಯಿಂದ ಇಲ್ಲಿಯ ತನಕ ಕರೆಸಿಕೊಳ್ಳಬೇಕಿತ್ತಾ? ಅನ್ನುವ ಬೇಸರ ಕೆಲವರಿಗಂತೂ ಆಗಿರುವುದು ಸತ್ಯ .ಹೇಳಿ ಕೇಳಿ ಈ ಖುಷ್ಬು “ಆ” ಪಕ್ಷದಿಂದ “ಈ” ಪಕ್ಷಕ್ಕೆ ಬಂದು ರಾಷ್ಟ್ರೀಯ ಮಹಿಳಾ ಆಯೇೂಗದ ಸದಸ್ಯರೂ ಆಗಿ ಈಗ ನಮಗೇನೆ ಪಾಠ ಮಾಡುವ ಮಟ್ಟಿಗೆ ಬೆಳೆದುಬಿಟ್ಟರಾ ಅಂದು ಹುಬ್ಬೇರಿಸದವರೇನು ಕಡಿಮೆ ಇಲ್ಲ.
ಬಹು ಹಿಂದೆ ತಮಿಳುನಾಡಿನಲ್ಲಿ ನಡೆದ ಒಂದು ಘಟನೆ ನೆನಪಾಗುತ್ತದೆ. ಆಗ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದವರು ಎ.ಐ.ಡಿ.ಎಂ.ಕೆ. ಸುಪ್ರೀಮೊ ಜಯಲಲಿತಾ. ಕೇಂದ್ರದಲ್ಲಿ ಆಡಳಿತ ಎನ್.ಡಿ.ಎ.ಬೆಂಬಲಿತ ಬಿಜೆಪಿ. ಅದೇ ಸಂದರ್ಭದಲ್ಲಿ ತಮಿಳುನಾಡಿನಲ್ಲಿ ರಾಜ್ಯಪಾಲೇ ಬೇಗಂ ಅನ್ನುವ ಮುಸ್ಲಿಂ ಮಹಿಳೆ. ಅಂದಿನ ಕೇಂದ್ರ ಸರಕಾರಕ್ಕೆ ತಮಿಳುನಾಡಿನ ಡಿ.ಎಂ.ಕೆ.ಕರುಣಾನಿಧಿಯವರ ಬೆಂಬಲ. ಈ ಕರುಣಾನಿಧಿ ಅವರಿಗೆ ಈ ಜಯಲಲಿತಾರನ್ನು ಹೇಗಾದರು ಮಾಡಿ ಕುರ್ಚಿಯಿಂದ ಇಳಿಸಲೇಬೇಕು ಅನ್ನುವ ಹಠ. ಅಂತೂ ಕೊನೆಗೆ ಅಂದಿನ ಗೃಹಮಂತ್ರಿ ಲಾಲಕೃಷ್ಣ ಆಡ್ವಾಣಿಯವರಿಗೆ ಒತ್ತಡ ಹೇರಿ ತಮಿಳುನಾಡು ರಾಜ್ಯಪಾಲೆಗೆ ಒಂದು ಮೌಖಿಕ ಸಂದೇಶ ಕಳುಹಿಸಿದರು. ತಮಿಳುನಾಡಿನಲ್ಲಿ ಸರಕಾರದಲ್ಲಿ ಅರಾಜಕತೆ ಇದೆ. ಹಾಗಾಗಿ ರಾಷ್ಟ್ರಪತಿ ಅಧಿಕಾರ ಹೇರಲು ಇದು ಸಕಾಲ ಅನ್ನುವ ವರದಿ ನೀಡುವಂತೆ ಸಂದೇಶ ರವಾನೆಯಾಯಿತು. ಆದರೆ ಅಂದಿನ ತಮಿಳುನಾಡಿನ ರಾಜ್ಯ ಪಾಲೆ ಮಹಿಳೆ ಅಲ್ವೇ? ಈ ರಾಜ್ಯಪಾಲೆ ಬೇಗಂ ಈ ಕೇಂದ್ರಕ್ಕೆ ಯಾವ ರೀತಿಯಾಗಿ ವರದಿ ನೀಡಿದರು ಗೊತ್ತಾ? ಜಯಲಲಿತಾ ಅಕ್ಕಾ ತುಂಬಾ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ಈ ವರದಿ ನೇೂಡಿದ ಲಾಲ್ ಕೃಷ್ಣರ ಕಣ್ಣು ಕೆಂಪಾಗಿ ತಕ್ಷಣವೇ ರಾಜ್ಯಪಾಲೆ ಬೇಗಂ ಅವರಿಗೆ ಇನ್ನೊಂದು ಸಂದೇಶ ಬಂತು. ‘ನೀವು ಆದಷ್ಟು ಬೇಗ ದೆಹಲಿಗೆ ಬನ್ನಿ’. ಪಾಪ ನಮ್ಮ ಬೇಗಂ ಮನೆಗೆ ಹೇೂದರು. ಅದಕ್ಕೆ ಹೇಳುವುದು ಈ ಹೆಂಗಸರನ್ನು ಯಾವತ್ತೂ ನಂಬಬಾರದು ಅನ್ನುವುದು. ನಾವು ಹೇಳುವುದು ಒಂದು ಅವರು ಮಾಡುವುದು ಇನ್ನೊಂದು. ಇಂದಿನ ಪ್ರಸಂಗದಲ್ಲಿ ಕೂಡಾ ನಮ್ಮ ಖುಷ್ಬು ಅಮ್ಮ ಕೂಡ ತಮಿಳುನಾಡಿನವರು ಅಲ್ವೇ? ನಮ್ಮ ಖುಷ್ಬು ಅಕ್ಕನ ಪರಿಸ್ಥಿತಿ ಏನಾಗುತ್ತದೋ ಗೊತ್ತಿಲ್ಲ. ಕೈಲಾಸದಲ್ಲಿ ಕೂತ ಶಂಕರನನ್ನೇ ಹೇಳಬೇಕು ಅಲ್ವೇ?
ವಿಶ್ಲೇಷಣೆ- ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ