Friday, October 18, 2024
Friday, October 18, 2024

ಯುವಜನತೆ ಮಾದಕ ವ್ಯಸನ ವಿರುದ್ಧದ ಕಾನೂನನ್ನು ಅರಿಯಬೇಕಿದೆ: ನ್ಯಾ.ಜಾನ್ ಮೈಕೆಲ್ ಕುನ್ಹಾ

ಯುವಜನತೆ ಮಾದಕ ವ್ಯಸನ ವಿರುದ್ಧದ ಕಾನೂನನ್ನು ಅರಿಯಬೇಕಿದೆ: ನ್ಯಾ.ಜಾನ್ ಮೈಕೆಲ್ ಕುನ್ಹಾ

Date:

ಉಡುಪಿ, ಜುಲೈ 22: ಯುವಜನತೆ ಮಾದಕ ವ್ಯಸನ ವಿರುದ್ದದ ಕಾನೂನಿನ ಅರಿವು ಹೊಂದುವುದರ ಜೊತೆಗೆ, ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಮಾದಕ ವಸ್ತುಗಳಿಂದ ದೂರವಿದ್ದು ಸದೃಢ ಆರೋಗ್ಯ ಹೊಂದಿ, ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ಜಾನ್ ಮೈಕಲ್ ಕುನ್ಹಾ ಹೇಳಿದರು. ಅವರು ಶನಿವಾರ ನಗರದ ಮಣಿಪಾಲ ಕೆಎಂಸಿಯ ಡಾ.ಟಿ.ಎಂ.ಎ.ಪೈ ಆಡಿಟೋರಿಯಂನಲ್ಲಿ ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಅಂಗವಿಕಲರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು, ಸಾರ್ವಜನಿಕ ಶಿಕ್ಷಣ ಇಲಾಖೆ, ವೈಕುಂಠ ಬಾಳಿಗ ಕಾನೂನು ಮಹಾವಿದ್ಯಾಲಯ ಹಾಗೂ ಮಾಹೆ ಸಹಯೋಗದಲ್ಲಿ ನಡೆದ ‘ಮಾದಕ ವಸ್ತುಗಳ ಕುರಿತು ಯುವಜನತೆ ಕಾರ್ಯಾಗಾರ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಒಂದು ಕಡೆ ಹೊಸ ಯೋಜನೆಗಳು ಯುವಜನತೆಯ ಬದುಕನ್ನ ಬದಲಾಯಿಸುತ್ತಿದ್ದರೆ, ಮತ್ತೊಂದು ಕಡೆ ಮಾದಕ ವ್ಯಸನದಿಂದ ಯುವಜನತೆಯ ಜೀವನ, ಅವರ ಕುಟುಂಬ, ಸಮಾಜ ಹಾಳಾಗುತ್ತಿದೆ. ಹೈಕೋರ್ಟ್ ನ ಅಂಕಿ ಅಂಶಗಳಂತೆ, ರಾಜ್ಯದ ನ್ಯಾಯಾಲಯಗಳಲ್ಲಿ ಡಿಸೆಂಬರ್ 2021 ರಲ್ಲಿ 6554 ಮಾದಕ ವ್ಯಸನ ಪ್ರಕರಣ ಬಾಕಿ ಇದ್ದು, ಮೇ 2023 ರಲ್ಲಿ ಇದರ ಸಂಖ್ಯೆ 10,167 ಕ್ಕೇರಿದೆ. ಬೆಂಗಳೂರು ಅತೀ ಹೆಚ್ಚು ಮಾದಕ ವ್ಯಸನ ಪ್ರಕರಣ ಕಂಡುಬರುವ ಜಿಲ್ಲೆಯಾಗಿದ್ದು, ಎರಡನೇ ಸ್ಥಾನದಲ್ಲಿ ಮಂಗಳೂರು. ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿ ಶಿವಮೊಗ್ಗ ಮತ್ತು ಉಡುಪಿ ಜಿಲ್ಲೆಗಳಿವೆ ಎಂದರು.

ಉಡುಪಿ ಜಿಲ್ಲೆಯಲ್ಲಿ 300 ಪ್ರಕರಣಗಳು ದಾಖಲಾಗಿದ್ದು, ಎಫ್.ಐ.ಆರ್. ನಲ್ಲಿ 24 ಆರೋಪಿಗಳು ಪದವೀಧರರು, ವೈದ್ಯರು ಮತ್ತು ಮೆಡಿಕಲ್ ವಿದ್ಯಾರ್ಥಿಗಳಾಗಿದ್ದಾರೆ. ಇದರಿಂದ ತಿಳಿಯುವುದೇನೆಂದರೆ, ಮಾದಕ ವ್ಯಸನ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆ ಎದ್ದು ಕಾಣಿಸುತ್ತಿದೆ. ಎನ್.ಡಿ.ಪಿ.ಎಸ್ ಕಾಯ್ದೆಯನ್ವಯ ಮಾದಕ ದ್ರವ್ಯ ತಯಾರಿಸುವವರು, ವ್ಯಸನಿಗಳು, ಸಾಗಾಟ ಮಾರುವವರನ್ನು ಕಾನೂನು ಒಂದೇ ರೀತಿಯಲ್ಲಿ ನೋಡುತ್ತದೆ. ಭಾರತೀಯ ದಂಡ ಸಂಹಿತೆಯಲ್ಲಿ(ಐಪಿಸಿ)ಯಲ್ಲಿ ಕೊಲೆಗಾರನಿಗೆ ಕಡಿಮೆ ಅವಧಿಯ ಶಿಕ್ಷೆ ಇದ್ದರೆ, ಎನ್.ಡಿ.ಪಿ.ಎಸ್ ಅಲ್ಲಿ ಅದಕ್ಕಿಂತ ತೀವ್ರ ತರವಾದ ಶಿಕ್ಷೆ ಇದೆ ಎಂದರು.

ಮಾಹೆಯ ಉಪಕುಲಪತಿ ಡಾ. ಶರತ್ ಕುಮಾರ್ ರಾವ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಾನಸಿಕ ಒತ್ತಡ, ಭಾವನೆ, ಮಾನಸಿಕ ಖಿನ್ನತೆಯಂತ ಕಾರಣಗಳು ವಿದ್ಯಾರ್ಥಿಗಳನ್ನು ಮಾದಕ ವ್ಯಸನಿಗಳಾಗಿಸುತ್ತವೆ. ಪೋಷಕರು ನಿರಂತರ ತಮ್ಮ ಕೆಲಸದಲ್ಲಿ ನಿರತರಾಗಿರುವುದರಿಂದ ಮಕ್ಕಳ ಕಡೆ ಗಮನ ಹರಿಸುವುದು ತುಂಬಾ ಕಡಿಮೆಯಾಗುತ್ತಿದೆ. ಡ್ರಗ್ಸ್ ವ್ಯಸನವು ವಿದ್ಯಾರ್ಥಿಯ ಜೀವನದ ಗುರಿಯ ಮೇಲೆ, ಕುಟುಂಬದ ಮೇಲೆ ಮತ್ತು ಮುಖ್ಯವಾಗಿ ಸಮಾಜದ ಮೇಲೆ ಪರಿಣಾಮ ಬೀರುತ್ತದೆ. ಯುವಜನತೆಯು ದೇಶದ ಭವಿಷ್ಯವಾಗಿದ್ದು, ಮಾದಕ ದ್ರವ್ಯವು ಅವರನ್ನು ಹಾಳು ಮಾಡುತ್ತಿದೆ ಎಂದು ಅಭಿಪ್ರಾಯಪಟ್ಟರು. ಮಾಹೆಯ ರಿಜಿಸ್ಟ್ರಾರ್ ಡಾ.ಪಿ.ಗಿರಿಧರ ಕಿಣಿ ಮಾದಕ ವ್ಯಸನದ ಕುರಿತು ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.

ಪ್ರಧಾನ ಮತ್ತು ಸತ್ರ ನ್ಯಾಯಾಲಯ ನ್ಯಾಯಾಧೀಶ ಶಾಂತವೀರ ಶಿವಪ್ಪ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಎಚ್., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಮಚ್ಚಿಂದ್ರ, ಕೆ ಎಸ್ ಎಲ್ ಎಸ್ ಎ ಉಪಕಾರ್ಯದರ್ಶಿ ರಾಘವೇಂದ್ರ ಶೆಟ್ಟಿಗಾರ್, ಹಿರಿಯ ನ್ಯಾಯಾಧೀಶೆ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್ ಶರ್ಮಿಳಾ, ವಕೀಲರ ಸಂಘದ ಅಧ್ಯಕ್ಷ ಬಿ.ನಾಗರಾಜ್, ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಾರುತಿ, ಮಾಹೆಯ ವಿದ್ಯಾರ್ಥಿ ವ್ಯವಹಾರಗಳ ವಿಭಾಗದ ನಿರ್ದೇಶಕಿ ಗೀತಾ ಮಯ್ಯ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಇತರರ ಭಾವದಲ್ಲಿ

ಸವಿಗೆ ಪಿಯುಸಿಯಲ್ಲಿ 85% ಮಾರ್ಕ್ಸ್ ಬಂದಿತ್ತು. ಅವಳಿಗೆ ಸಿಗಬೇಕಾದ ಅಂಕಕ್ಕಿಂತ 10%...

ಅ.27: ಸಾಂಪ್ರದಾಯಿಕ ಗೂಡುದೀಪ ಸ್ಪರ್ಧೆ, ಪ್ರದರ್ಶನ ಮತ್ತು ಮಾರಾಟ

ಉಡುಪಿ, ಅ.18: ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ ಉಡುಪಿ ಜಿಲ್ಲೆ, ಶಬರಿಮಲೆ...

ಕಬ್ಬದುಳುಮೆ: ಹಳೆಗನ್ನಡ ಕಾವ್ಯದೋದು ಕಮ್ಮಟ

ತೆಂಕನಿಡಿಯೂರು, ಅ.18: ನೆಲವನ್ನು ಉತ್ತು ಅದರೊಡಲಿಗೆ ಕಾಳು ಬಿತ್ತಿ ಬಾಳು ಕಟ್ಟಿಕೊಂಡ...

ಇಸ್ರೇಲ್ ದಾಳಿಗೆ ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್ ಸಾವು

ಯು.ಬಿ.ಎನ್.ಡಿ., ಅ.18: ಹಮಾಸ್ ಮುಖ್ಯಸ್ಥ ಮತ್ತು ಕಳೆದ ವರ್ಷ ಅಕ್ಟೋಬರ್ 7...
error: Content is protected !!