ಮಣಿಪಾಲ, ಜು. 22: ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ನರವಿಜ್ಞಾನ ವಿಭಾಗದ ವತಿಯಿಂದ ಮೆದುಳಿನ ಆರೋಗ್ಯ ಜಾಗೃತಿ ಶಿಕ್ಷಣ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ವಿಶ್ವ ಮೆದುಳಿನ ದಿನವನ್ನು ಆಚರಿಸಲಾಯಿತು. ಪ್ರತಿ ವರ್ಷ ಜುಲೈ 22 ಅನ್ನು ವಿಶ್ವ ಮೆದುಳಿನ ದಿನವನ್ನಾಗಿ ಆಚರಿಸಲಾಗುತ್ತದೆ. ಈ ವರ್ಷದ ಘೋಷ ವಾಕ್ಯ “ಮೆದುಳಿನ ಆರೋಗ್ಯ ಮತ್ತು ಅಂಗವೈಕಲ್ಯ” ಈ ಅಂತರಾಷ್ಟ್ರೀಯ ಆಂದೋಲನವು ಮಾಹಿತಿಯ ಅಂತರವನ್ನು ಮುಚ್ಚಲು ಮತ್ತು ಮೆದುಳಿನ ಆರೋಗ್ಯದ ದುರ್ಬಲತೆಗಳ ಬಗ್ಗೆ ಸಾರ್ವಜನಿಕ ಅರಿವನ್ನು ಹೆಚ್ಚಿಸಲು ಶ್ರಮಿಸುತ್ತದೆ. ಇದು ವಿಕಲಾಂಗ ವ್ಯಕ್ತಿಗಳಿಗೆ ಉತ್ತಮ ಗುಣಮಟ್ಟದ ಆರೋಗ್ಯವನ್ನು ಒದಗಿಸುವ ಪ್ರಾಮುಖ್ಯತೆಯನ್ನು ಒತ್ತಿ ಹೇಳುತ್ತದೆ.
ಮೆದುಳು ಮಾನವ ದೇಹದ ಬಹು ಮುಖ್ಯ ಅಂಗವಾಗಿದೆ, ನಮ್ಮ ಭಾವನೆಗಳು ಆಲೋಚನೆಗಳು ಮತ್ತು ಎಲ್ಲಾ ಕ್ರೀಯೆಗಳಿಗೆ ಕಾರಣವಾಗಿದೆ. ಮೆದುಳಿನ ಆರೋಗ್ಯವನ್ನು ಕಾಪಾಡಿಕೊಂಡರೆ, ಇದರಿಂದ ನಮ್ಮ ದೇಹದ ಆರೋಗ್ಯವನ್ನು ಕಾಪಾಡಿಕೊಂಡಂತೆ. ಆದ್ದರಿಂದ ಉತ್ತಮ ಸಮತೋಲಿತ ಆಹಾರ ಮತ್ತು ವ್ಯಾಯಾಮದ ಮೂಲಕ ಮೆದುಳಿನ ಆರೋಗ್ಯವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು. ಇದನ್ನು ಗಮನಿಸಿ ವಿಶ್ವ ಆರೋಗ್ಯ ಸಂಸ್ಥೆಯು ಮೆದುಳಿನ ಆರೋಗ್ಯದ ಕುರಿತು ಜಾಗೃತಿ ಮೂಡಿಸಲು ಪ್ರತೀ ವರ್ಷ ಜುಲೈ 22ರಂದು ಮೆದುಳು ದಿನವನ್ನಾಗಿ ಆಚರಿಸುತ್ತದೆ ಎಂದು ಹೇಳಿದರು.
ಗೌರವ ಅತಿಥಿಗಳಾಗಿ ಮಾತನಾಡಿದ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ ಶೆಟ್ಟಿ ಅವರು, ಮೆದುಳಿನ ಕಾಯಿಲೆಗೆ ಸಂಬಂಧಿಸಿದ ಎಲ್ಲಾ ಕಾಯಿಲೆಗಳಿಗೆ ಇಂದು ಚಿಕಿತ್ಸೆ ಲಭ್ಯವಿದೆ. ಆದರೆ ಅದು ಬೇಗ ಪತ್ತೆ ಹಚ್ಚಿ ಸಕಾಲದಲ್ಲಿ ದೊರೆಯಬೇಕು. ಮೆದುಳಿನ ಚಿಕಿತ್ಸೆಗೆ ಸಂಬಂಧಿತ ಹೊಸ ತಂತ್ರಜ್ಞಾನಗಳು, ತಜ್ಞ ವೈದ್ಯರು, ವಿಶೇಷ ವಿಭಾಗಗಳು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ಲಭ್ಯವಿದೆ. ಇದನ್ನು ಸಾರ್ವಜನಿಕರು ಸಕಾಲದಲ್ಲಿ ಬಳಸಿಕೊಳ್ಳಬೇಕು ಎಂದರು.
ಮತ್ತೋರ್ವ ಗೌರವ ಅತಿಥಿ ಮಾಹೆ ಮಣಿಪಾಲದ ಬೋಧನಾ ಆಸ್ಪತ್ರೆಗಳ ಮುಖ್ಯ ನಿರ್ವಹಣಾಧಿಕಾರಿ ಡಾ. ಆನಂದ್ ವೇಣುಗೋಪಾಲ್, ಮೆದುಳಿನ ಆರೋಗ್ಯದ ಕುರಿತಾದ ಭಿತ್ತಿಪತ್ರ (ಪೋಸ್ಟರ್) ಸ್ಪರ್ಧೆಯ ವಿಜೇತರಿಗೆ ಬಹುಮಾನಗಳನ್ನು ವಿತರಿಸಿದರು.
ಕಾರ್ಯಕ್ರಮದ ಕುರಿತು ಅವಲೋಕನ ನೀಡಿದ ನರರೋಗ ಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಹಾಗೂ ಮುಖ್ಯಸ್ಥರಾದ ಡಾ. ಅಪರ್ಣಾ ಆರ್ ಪೈ ಅವರು ಮೆದುಳಿನ ದಿನದ ಜಾಗೃತಿ ಅಂಗವಾಗಿ ಆಸ್ಪತ್ರೆಯ ಫೇಸ್ಬುಕ್ ಜಾಲತಾಣದಲ್ಲಿ ಮೆದುಳು ಆರೋಗ್ಯದ ಕುರಿತು ಸರಣಿ ಮಾತು ಇಂದು ಬಿತ್ತರಗೊಳ್ಳೊತ್ತಿದೆ ಎಂದರು. ನರರೋಗ ಶಸ್ತ್ರಚಿಕಿತ್ಸಾ ವಿಭಾಗದ ಪ್ರಾಧ್ಯಾಪಕರಾದ ಡಾ. ರಾಘವೇಂದ್ರ ನಾಯಕ ಅವರು ಈ ವರ್ಷದ ಘೋಷ ವಾಕ್ಯವಾದ, ಮೆದುಳಿನ ಆರೋಗ್ಯ ಮತ್ತು ಅಂಗವೈಕಲ್ಯದ ಕುರಿತು ವಿವರವಾದ ಅವಲೋಕನ ನೀಡಿದರು. ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಶ್ರೀಪದ್ಮ ಪಿ.ವಿ ಕಾರ್ಯಕ್ರಮ ನಿರೂಪಿಸಿದರು.