ಉಡುಪಿ, ಜು. 21: ಮಲೇರಿಯಾ, ಡೆಂಗ್ಯೂ, ಜ್ವರ, ನೆಗಡಿ ಕಾಯಿಲೆಗಳು ಯಾವಾಗ ಬರುತ್ತವೆ, ಈ ರೋಗಗಳು ಏಕೆ ಬರುತ್ತವೆ, ಯಾವುದರಿಂದ ಬರುತ್ತದೆ, ಅವುಗಳ ಲಕ್ಷಣಗಳೇನು, ಈ ರೋಗಗಳು ಬಾರದಂತೆ ಏನು ಮಾಡಬೇಕು, ನಮ್ಮ ಆರೋಗ್ಯವನ್ನು ಸುರಕ್ಷಿತವಾಗಿ ಹೇಗೆ ರಕ್ಷಣೆ ಮಾಡಿಕೊಳ್ಳಬೇಕು ಈ ಎಲ್ಲಾ ವಿಷಯಗಳ ಬಗ್ಗೆ ಶಾಲಾ ಮಕ್ಕಳಿಗೆ ನಿರಂತರವಾಗಿ ತಿಳಿಸುವ ವಿನೂತನ ಮತ್ತು ಬಹುಶ: ರಾಜ್ಯದಲ್ಲೇ ಪ್ರಥಮವಾದ ‘ಆರೋಗ್ಯ ಶನಿವಾರ’ ಎಂಬ ಕಾರ್ಯಕ್ರಮ ಉಡುಪಿ ಜಿಲ್ಲೆಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಆರಂಭಿಸಲಾಗಿದ್ದು, ಇದರಿಂದ ಉತ್ತಮ ಫಲಿತಾಂಶ ಸಹ ಕಂಡುಬರುತ್ತಿದೆ. ಉಡುಪಿ ಜಿಲ್ಲೆಯಲ್ಲಿರುವ 1098 ಸರ್ಕಾರಿ, ಅನುದಾನಿತ, ಅನುದಾನ ರಹಿತ ಹಾಗೂ ಖಾಸಗಿ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿನ 1.61 ಲಕ್ಷ ಮಕ್ಕಳಿಗೆ ಪ್ರತಿ ಶನಿವಾರ, ಪ್ರಸ್ತುತ ಕಾಲಗಳಲ್ಲಿ (ಬೇಸಿಗೆ, ಮಳೆಗಾಲ, ಚಳಿಗಾಲ) ಕಂಡುಬರುವ ಕಾಯಿಲೆಗಳ ಬಗ್ಗೆ ಮತ್ತು ಅವುಗಳು ಬಾರದಂತೆ ವಹಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಜೂನ್ ತಿಂಗಳಿನಿ0ದ ‘ಆರೋಗ್ಯ ಶನಿವಾರ’ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ.
ಈ ಕಾರ್ಯಕ್ರಮದ ಮೂಲಕ ಪ್ರತಿ ಶನಿವಾರ ಬೆಳಗ್ಗೆ ಎಲ್ಲಾ ಶಾಲಾ ಕೊಠಡಿಯಲ್ಲಿ ಆರೋಗ್ಯ ಅರಿವು ವಿಷಯಗಳ ಬಗ್ಗೆ ತರಬೇತಿ ಪಡೆದಿರುವ ಶಾಲಾ ಶಿಕ್ಷಕರು ವಿದ್ಯಾರ್ಥಿಗಳಿಗೆ ಪ್ರಸಕ್ತ ಸಮಯದಲ್ಲಿ ಕಂಡುಬರುವ ಕಾಯಿಲೆಗಳ ಬಗ್ಗೆ ಸಂಪೂರ್ಣ ಅರಿವು ಮೂಡಿಸುತ್ತಿದ್ದಾರೆ. ಶಾಲೆಗೆ ಸಮೀಪವಿರುವ ಆರೋಗ್ಯ ಕೇಂದ್ರದ ಸಿಬ್ಬಂದಿ ಮೂಲಕ ಸಹ ಮಾಹಿತಿ ನೀಡಿ, ಮಕ್ಕಳ ಆರೋಗ್ಯದ ಸುರಕ್ಷತೆಗೆ ಹಾಗೂ ಮಕ್ಕಳ ಮೂಲಕ ಅವರ ಪೋಷಕರಿಗೂ ಕೂಡಾ ಆರೋಗ್ಯ ಕಾಳಜಿಯ ಬಗ್ಗೆ ಅರಿವು ಮೂಡಿಸಿ, ಆರೋಗ್ಯಯುತ ಸಮುದಾಯ ನಿರ್ಮಾಣಗೊಳ್ಳಲು ಈ ಕಾರ್ಯಕ್ರಮ ಪ್ರಮುಖ ವೇದಿಕೆಯಾಗಿದೆ. ಮಲೇರಿಯಾ, ಡೆಂಗ್ಯೂ ಸೇರಿದಂತೆ ಹಲವು ಕಾಯಿಲೆಗಳು ಸೊಳ್ಳೆಗಳ ಮೂಲಕ ಹಾಗೂ ಅನೈರ್ಮಲ್ಯದ ಮೂಲಕ ಹರಡಲಿದ್ದು, ಇದನ್ನು ತಡೆಯಲು ಶಾಲೆ ಮತ್ತು ಮನೆಯ ಪರಿಸರದಲ್ಲಿ ಕೊಳಚೆ ನೀರು ನಿಲ್ಲದಂತೆ ಹಾಗೂ ಸ್ವಚ್ಛತೆಯನ್ನು ಕಾಪಾಡುವುದರಿಂದ ಕಾಯಿಲೆಗಳು ಹರಡದಂತೆ ನಿಯಂತ್ರಿಸಬಹುದು ಎಂಬ ಬಗ್ಗೆ ಸೇರಿದಂತೆ ದೈನಂದಿನ ಚಟುವಟಿಕೆಯಲ್ಲಿ ಸ್ವಚ್ಚತೆಯನ್ನು ಕಾಪಾಡಿಕೊಳ್ಳುವುದು, ಪ್ರಥಮ ಚಿಕಿತ್ಸೆ ವಿಧಾನಗಳು ಸೇರಿದಂತೆ ಹಲವು ಆರೋಗ್ಯ ಸಂಬಂಧಿತ ವಿಷಯಗಳ ಬಗ್ಗೆ ಮಕ್ಕಳಿಗೆ ಸರಳವಾಗಿ ಹಾಗೂ ಪರಿಣಾಮಕಾರಿಯಾಗಿ ತಿಳಿಸುವ ಮೂಲಕ ಈ ಸಂದೇಶಗಳು ಅವರ ಮನೆಗಳಿಗೂ ತಲುಪುವಂತೆ ಮಾಡಲಾಗುತ್ತಿದೆ.
ಮಳೆಗಾಲದ ಸಮಯದಲ್ಲಿ ಹವಾಮಾನ ಇಲಾಖೆಯ ಮಾಹಿತಿ ಆಧರಿಸಿ, ಮಕ್ಕಳು ವಾಸಿಸುವ ಪ್ರದೇಶದಲ್ಲಿ ಬೀಳಬಹುದಾದ ಮಳೆಯ ಪ್ರಮಾಣ, ಅಪಾಯಕಾರಿಯಾಗಿ ತುಂಬಿ ಹರಿಯುತ್ತಿರುವ ಹಳ್ಳ ಮತ್ತು ತೋಡುಗಳನ್ನು ದಾಟದಂತೆ ಹಾಗೂ ಅನಿವಾರ್ಯವಾಗಿ ದಾಟಬೇಕಾದ ಸಂದರ್ಭದಲ್ಲಿ ವಹಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳು, ಪರ್ಯಾಯ ರಸ್ತೆ ಬಳಸುವ ಬಗ್ಗೆ, ನೈಸರ್ಗಿಕ ವಿಕೋಪಗಳ ಸಂದರ್ಭದಲ್ಲಿ ವಹಿಸಬೇಕಾದ ಎಚ್ಚರಿಕೆಗಳ ಬಗ್ಗೆ ಸಹ ವಿದ್ಯಾರ್ಥಿಗಳಿಗೆ ವ್ಯಾಪಕ ಅರಿವು ಮೂಡಿಸಲಾಗುತ್ತಿದೆ. ಜಿಲ್ಲೆಯ ಬಹುತೇಕ ಪ್ರೌಢಶಾಲೆಗಳಲ್ಲಿ ಎಲ್.ಇ.ಡಿ ವ್ಯವಸ್ಥೆ ಇದ್ದು ಉಡುಪಿ ಜಿಲ್ಲಾ ಪಂಚಾಯತ್‌ನ ಸಂಪನ್ಮೂಲ ಕೇಂದ್ರದಲ್ಲಿರುವ ಸ್ಟುಡಿಯೋ ಮೂಲಕ ವೈದ್ಯರಿಂದ ಹಾಗೂ ವಿಷಯ ತಜ್ಞರಿಂದ ವಿದ್ಯಾರ್ಥಿಗಳಿಗೆ ಆರೋಗ್ಯ ಅರಿವು ಮೂಡಿಸುವ ಕಾರ್ಯಕ್ರಮಗಳ ನೇರ ಪ್ರದರ್ಶನಕ್ಕೆ ಕೂಡಾ ವ್ಯವಸ್ಥೆ ಮಾಡಲಾಗಿದೆ. ಈ ಕಾರ್ಯಕ್ರಮದ ಲೈವ್ ಲಿಂಕ್ ನ್ನು ಎಲ್ಲಾ ಶಾಲೆಗಳ ಮುಖ್ಯೋಪಧ್ಯಾಯರಿಗೆ ಕಳುಹಿಸಿ, ಲ್ಯಾಪ್ ಟಾಪ್ ಮೂಲಕ ಶಾಲೆಯಲ್ಲಿ ನೇರ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ. ಆರೋಗ್ಯ ಸಂಬಂಧಿತ ಯೂಟ್ಯೂಬ್ ವೀಡಿಯೋಗಳ ಮೂಲಕ ಸಹ ಅರಿವು ಮೂಡಿಸಿ, ಯಾವುದೇ ಹಂತದಲ್ಲೂ ಮಕ್ಕಳು ಈ ಕಾರ್ಯಕ್ರಮದಿಂದ ವಂಚಿತರಾಗದoತೆ ನೋಡಿಕೊಳ್ಳಲಾಗುತ್ತಿದೆ.
“ಮಕ್ಕಳು ಅನಾರೋಗ್ಯಕ್ಕೆ ಒಳಗಾಗಿ ಶಾಲೆಗೆ ಗೈರು ಹಾಜರಾಗುವುದರಿಂದ ಅವರ ಶೈಕ್ಷಣಿಕ ಚಟುವಟಿಕೆಗಳಿಗೆ ಮತ್ತು ದೈಹಿಕ ಬೆಳವಣಿಗೆಗೆ ತೊಂದರೆಯಾಗುತ್ತದೆ. ಮಕ್ಕಳನ್ನು ಆರೋಗ್ಯವಂತರನ್ನಾಗಿ ಮಾಡಲು ಮತ್ತು ಅವರನ್ನು ಆಸ್ಪತ್ರೆಯಿಂದ ದೂರ ಉಳಿಸುವ ಉದ್ದೇಶದಿಂದ ಪ್ರತೀ ಶನಿವಾರ ಆರೋಗ್ಯ ಸಂಬಂಧಿತ ಅರಿವು ಕಾರ್ಯಕ್ರಮವನ್ನು ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ ಆಯೋಜಿಸಲಾಗುತ್ತಿದೆ. ಇದರಿಂದಾಗಿ ಮಕ್ಕಳಿಗೆ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಸಾಧ್ಯವಾಗುತ್ತದೆ. ಮಕ್ಕಳು ತಮಗೆ ದೊರೆತ ಈ ಮಾಹಿತಿಯನ್ನು ಮನೆಯಲ್ಲಿ ಹಂಚಿಕೊಳ್ಳುವುದರಿಂದ ಇಡೀ ಸಮುದಾಯಕ್ಕೆ ಆರೋಗ್ಯ ಮಾಹಿತಿ ತಲುಪುತ್ತಿದೆ. ಈ ಕಾರ್ಯಕ್ರಮ ಆರಂಭವಾದ ನಂತರ ಶಾಲೆಗಳಿಗೆ ಪರಿವೀಕ್ಷಣೆಗೆ ತೆರಳಿದಾಗ ಶಾಲಾ ಆವರಣದಲ್ಲಿ ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡಿರುವುದು ಕಂಡುಬರುತ್ತಿದೆ. ಆರೋಗ್ಯ ಇಲಾಖೆಯ ಸಹಭಾಗಿತ್ವದಲ್ಲಿ ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಮಾರ್ಗದರ್ಶನದಂತೆ ಜಿಲ್ಲೆಯಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ“– ಕೆ.ಗಣಪತಿ, ಡಿಡಿಪಿಐ. ಉಡುಪಿ.