ವಿದ್ಯಾಗಿರಿ, ಜು. 17: ಜನರು ಮತ್ತೆ ದೇಶೀಯ ಚಿಕಿತ್ಸಾ ಪದ್ಧತಿಗೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ. ಎಂ ಮೋಹನ ಆಳ್ವ ಹೇಳಿದರು. ಆಳ್ವಾಸ್ ನಿರಾಮಯ ಆಸ್ಪತ್ರೆಯಲ್ಲಿ ಜುಲೈ 17 ರಿಂದ ಆಗಸ್ಟ್ 16ರ ವರೆಗೆ ನಡೆಯಲಿರುವ ಕರ್ಕಿಟಕ ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಆಯುರ್ವೇದ ಚಿಕಿತ್ಸಾ ಪದ್ಧತಿಗೆ ಪೂರ್ವಜರು ಒಳ್ಳೆಯ ಕಾಯಕಲ್ಪವನ್ನು ಕೊಟ್ಟಿದ್ದಾರೆ. ಆಯುರ್ವೇದ ಚಿಕಿತ್ಸೆಗೆ ಸಂಬಂಧಪಟ್ಟಂತೆ ಪದವಿ, ಸ್ನಾತಕೋತ್ತರ, ಡಿಪ್ಲೊಮಾ, ಪಿಎಚ್.ಡಿ ಎಲ್ಲವೂ ಆಗಿದೆ. ಇದನ್ನು ಕಲಿತವರು, ಕಾಲವನ್ನು ಅರಿತುಕೊಂಡು ಆಗಾಗ್ಗೆ ಹೊಸ ರೂಪ ಕೊಡಬೇಕಾಗಿದೆ ಎಂದರು.
‘ಕರ್ಕಿಟಕ ಗಂಜಿ ಕಿಟ್’ ಅನ್ನು ಬಿಡುಗಡೆ ಮಾಡಲಾಯಿತು. ಆಳ್ವಾಸ್ ನಿರಾಮಯ ಮಲ್ಟಿ ಸ್ಪೆಷಾಲಿಟಿ ಆಯುಷ್ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕಿ ಡಾ. ಸುರೇಖಾ ಪೈ, ಆಳ್ವಾಸ್ ಆಯುರ್ವೇದ ವೈದ್ಯಕೀಯ ಕಾಲೇಜು ಪ್ರಾಂಶುಪಾಲ ಡಾ. ಸಜಿತ್ ಎಂ ಇದ್ದರು. ಕಾಲೋಚಿತ ರೋಗಗಳಿಗೆ ಪರಿಹಾರ ಕಂಡುಕೊಳ್ಳಬಹುದಾದ ವಿಶೇಷ ಆಯುರ್ವೇದ ಚಿಕಿತ್ಸೆಯನ್ನು ಕರ್ಕಿಟಕ ಚಿಕಿತ್ಸೆ ಎನ್ನುತ್ತಾರೆ ಎಂದು ಸಂಘಟಕರು ತಿಳಿಸಿದರು.
ಶೀತ ಮತ್ತು ತೇವಭರಿತ ಹವಾಮಾನದಿಂದಾಗಿ ಉಂಟಾಗುವ ದುಷ್ಪರಿಣಾಮಗಳಿಂದ ದೇಹವನ್ನು ಸಮತೋಲನದಲ್ಲಿ ಇರಿಸಲು ಆಯುರ್ವೇದ ಚಿಕಿತ್ಸೆಗಳಾದ ವಮನ, ವಿರೇಚನ, ನಸ್ಯ, ನಿರೂಹ ಬಸ್ತಿ, ಅನುವಾಸನ ಬಸ್ತಿ ಹಾಗೂ ಅಭ್ಯಂಗ, ಕಾಯಸೇಕ, ಭಾಷ್ಪಸ್ವೇದ, ಪೊಟ್ಟಲಿ ಸ್ವೇದ, ಉದ್ವರ್ತನ ಮುಂತಾದ ಚಿಕಿತ್ಸೆಗಳು ಇಲ್ಲಿದೆ. ವ್ಯಕ್ತಿಯ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳಾದ ಸಂಧಿನೋವು, ಡಿಸ್ಕ್ ಸಮಸ್ಯೆಗಳು, ಪಕ್ಷವಾತ, ಆಮವಾತ, ಸಂಧಿವಾತ, ನಿದ್ರಾಹೀನತೆ , ಶ್ವಾಸದ ತೊಂದರೆ, ಕೆಮ್ಮು, ಗ್ಯಾಸ್ಟ್ರಿಕ್ ಗಳಂತಹ ಸಂಪೂರ್ಣ ಪರೀಕ್ಷೆಯ ನಂತರ ಆಳ್ವಾಸ್ ನಿರಾಮಯ ಆಸ್ಪತ್ರೆಯ ವೈದ್ಯಕೀಯ ತಂಡದಿಂದ ಕರ್ಕಿಟಕ ಚಿಕಿತ್ಸೆಯನ್ನು ಕೊಡಲಾಗುತ್ತದೆ. ಹೆಚ್ಚಿನ ವಿವರಗಳಿಗಾಗಿ ಮೊಬೈಲ್ ಸಂಖ್ಯೆ 9742473545 ಅಥವಾ 9611686150 ಸಂಪರ್ಕಿಸಬಹುದು.