ಉಡುಪಿ, ಜು. 10: ಉಡುಪಿ ಸಂತೆಕಟ್ಟೆಯ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನಡೆಯುತ್ತಿರುವ ಓವರ್ ಪಾಸ್ ಕಾಮಗಾರಿ ಪ್ರದೇಶದಲ್ಲಿ ಸೋಮವಾರ ಮಣ್ಣು ಕುಸಿದ ಪರಿಣಾಮ ಸುತ್ತಮುತ್ತಲಿನ ಜನರಲ್ಲಿ ಆತಂಕ ಮನೆ ಮಾಡಿದೆ. ಕಳೆದ ಕೆಲವು ದಿನಗಳಿಂದ ಈ ಪ್ರದೇಶದಲ್ಲಿ ವ್ಯಾಪಕವಾಗಿ ಮಳೆ ಸುರಿದರೂ ರಾ.ಹೆ. ಪ್ರಾಧಿಕಾರದವರು ಎಚ್ಚೆತ್ತುಕೊಳ್ಳಲಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಣ್ಣು ಕುಸಿದ ಪರಿಣಾಮ ಅಲ್ಲಿ ನಿರ್ಮಿಸಿದ ತಡೆಗೋಡೆಗಳಿಗೆ ಹಾನಿಯುಂಟಾಗಿದೆ. ಘಟನಾ ಸ್ಥಳದಿಂದ ಕೂಗಳತೇ ದೂರದಲ್ಲಿರುವ ಅಂಗಡಿ ಮುಂಗಟ್ಟು ಹಾಗೂ ನಿವಾಸಿಗಳಲ್ಲಿ ಆತಂಕ ಮೂಡಿಸಿದೆ.
ಸಮಸ್ಯೆಗಳ ಸರಮಾಲೆ: ಸಂತೆಕಟ್ಟೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕಾಮಗಾರಿಗೆ ಸಂಬಂಧಿಸಿದಂತೆ ಉಂಟಾಗಿರುವ ಸಮಸ್ಯೆಗಳ ಬಗ್ಗೆ ಈ ಹಿಂದೆ ಮಾಧ್ಯಮಗಳಲ್ಲಿ ಹಲವು ಬಾರಿ ವಿಶೇಷ ವರದಿಗಳು ಪ್ರಕಟವಾಗಿವೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಜನರ ಸುರಕ್ಷತೆಯ ದೃಷ್ಟಿಯಿಂದ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಉಡುಪಿ ಜಿಲ್ಲಾಡಳಿತ ಗಡುವು ನೀಡಿದರೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇವುಗಳನ್ನು ಗಂಭೀರವಾಗಿ ಪರಿಗಣಿಸಿದ್ದರೆ, ಇಂತಹ ಘಟನೆ ಸಂಭವಿಸುತ್ತಿರಲಿಲ್ಲ ಎಂಬ ಕೂಗು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.