ಉಡುಪಿ, ಜು. 9: ಉದ್ಯೋಗಾಧಾರಿತ ಶಿಕ್ಷಣ ವ್ಯವಸ್ಥೆ ಇಂದಿನ ಅಗತ್ಯವಾಗಿದ್ದರೂ ರಾಷ್ಟ್ರೀಯ ಶಿಕ್ಷಣ ನೀತಿ (ಎನ್ ಇ ಪಿ) ರದ್ದು ಮಾಡುವ ರಾಜ್ಯ ಕಾಂಗ್ರೆಸ್ ಸರಕಾರದ ಚಿಂತನೆ ಮೂರ್ಖತನದ್ದು ಎಂದು ನಗರಸಭೆ ಮಾಜಿ ಅಧ್ಯಕ್ಷ ಗುಜ್ಜಾಡಿ ಪ್ರಭಾಕರ ನಾಯಕ್ ಹೇಳಿದರು. ದೀನ ದಯಾಳ್ ಚಾರಿಟೇಬಲ್ ಟ್ರಸ್ಟ್ (ರಿ.) ವತಿಯಿಂದ ಕುಂಜಿಬೆಟ್ಟಿನ ಸಹಕಾರ ಸೌಧದಲ್ಲಿರುವ ದೀನ ದಯಾಳ್ ಸಭಾಂಗಣದಲ್ಲಿ ನಡೆದ ಉಡುಪಿ ನಗರಸಭೆ ವ್ಯಾಪ್ತಿಯ ಪ್ರೌಢಶಾಲೆಗಳಲ್ಲಿ 2022 – 23ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪಂಡಿತ್ ದೀನ ದಯಾಳ್ ಉಪಾಧ್ಯಾಯ ಹಾಗೂ ಡಾ. ವಿ.ಎಸ್. ಸ್ಮರಣ ಪಾರಿತೋಷಕ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿನಿ ಗಾಯತ್ರಿ ಸ್ಮರಣ ಪಾರಿತೋಷಕ ವಿತರಣಾ ಸಮಾರಂಭದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು. ಭಾರತಮಾತೆ, ಪಂಡಿತ್ ದೀನ ದಯಾಳ್ ಉಪಾಧ್ಯಾಯ, ಶ್ಯಾಮ್ ಪ್ರಸಾದ್ ಮುಖರ್ಜಿ, ಡಾ. ವಿ.ಎಸ್. ಆಚಾರ್ಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.
ನಿಟ್ಟೂರು ಶಾಲಾ ನಿವೃತ್ತ ಮುಖ್ಯೋಪಾಧ್ಯಾಯರಾದ ಮುರಳಿ ಕಡೆಕಾರ್ ಮಾತನಾಡಿ, ಪ್ರತಿಭಾನ್ವಿತ ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಬದುಕಿನ ಮೌಲ್ಯಗಳು ಮತ್ತು ಉದ್ಯೋಗ ಆಧಾರಿತ ಶಿಕ್ಷಣದ ಬಗ್ಗೆ ಹೆಚ್ಚು ಚಿಂತಿಸಬೇಕು. ಸಮಾಜ ಉಪಯೋಗಿ ಕಾರ್ಯಗಳೊಂದಿಗೆ ಆದರ್ಶ ಜೀವನ ನಡೆಸಿ ಬದುಕಿನಲ್ಲಿ ಶ್ರೇಷ್ಠ ಅಂಕ ಪಡೆಯಬಹುದು ಎಂದು ಕರೆ ನೀಡಿದರು. ಉದ್ಯಮಿ ಮಲ್ಪೆ ವಿಶ್ವನಾಥ ಭಟ್ ಉಪಸ್ಥಿತರಿದ್ದರು.
ವಿದ್ಯಾ ಶ್ಯಾಮ್ ಸುಂದರ್ ಪ್ರಾರ್ಥಿಸಿದರು. ಟ್ರಸ್ಟಿನ ವಿಶ್ವಸ್ಥರಾದ ದಿನಕರ ಶೆಟ್ಟಿ ಹೆರ್ಗ ಸ್ವಾಗತಿಸಿದರು. ದೀನ ದಯಾಳ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಕೆ. ರಾಘವೇಂದ್ರ ಕಿಣಿ ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟಿಗಳಾದ ಡಾ. ರಶ್ಮಿ ರವಿರಾಜ್ ಆಚಾರ್ಯ, ಕೆ.ಟಿ. ಪ್ರಸಾದ್, ಸಂಧ್ಯಾ ಪ್ರಭು, ಸುಜಾಲ ಸತೀಶ್, ಭಾರತೀ ಚಂದ್ರಶೇಖರ್ ಉಪಸ್ಥಿತರಿದ್ದರು.