ಉಡುಪಿ, ಜು. 7: ಕರಾವಳಿ ಜಿಲ್ಲೆಯ ಬಗ್ಗೆ ಕಾಂಗ್ರೆಸ್ ಸರಕಾರ ತನ್ನ ನಿರ್ಲಕ್ಷ್ಯವನ್ನು ಈ ಬಜೆಟ್ ನಲ್ಲಿಯೂ ತೋರ್ಪಡಿಸಿ ಅನುದಾನ ಹಂಚಿಕೆಯಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಬಜೆಟ್ ಪ್ರತಿಕ್ರಿಯೆ ನೀಡಿದ್ದಾರೆ.
ಕಾಂಗ್ರೆಸ್ ಸರಕಾರ ತನ್ನ ಅವೈಜ್ಞಾನಿಕ ಗ್ಯಾರಂಟಿ ಯೋಜನೆಗಳನ್ನು ಶತಾಯ ಗತಾಯ ಅನುಷ್ಠಾನ ಮಾಡುವ ನಿಟ್ಟಿನಲ್ಲಿ ಜನಸಾಮಾನ್ಯರಿಗೆ ತೆರಿಗೆಯನ್ನು ಏರಿಕೆ ಮಾಡಿದೆ ಹಾಗೂ ರಾಜ್ಯದ 224 ಕ್ಷೇತ್ರಗಳ ಸಮಗ್ರ ಅಭಿವೃದ್ದಿಯನ್ನು ಸಂಪೂರ್ಣ ಕಡೆಗಣಿಸಿದೆ. ಆರೋಗ್ಯ, ಶಿಕ್ಷಣ, ಲೋಕೋಪಯೋಗಿ, ಮೀನುಗಾರಿಕೆ ಸಹಿತ ಇಲಾಖೆಗಳ ಪ್ರಮುಖ ಅಭಿವೃದ್ದಿ ಕಾಮಗಾರಿಗಳಿಗೆ ಅನುದಾನ ಒದಗಿಸುವಲ್ಲಿ ವಿಫಲವಾಗಿದೆ. ಕೃಷಿಕರು, ಮೀನುಗಾರರು, ಮೂರ್ತೆದಾರರಿಗೆ ಶಕ್ತಿ ತುಂಬುವ ನಿಟ್ಟನಲ್ಲಿ ಹೊಸ ಯೋಜನೆ ರೂಪಿಸಿಲ್ಲ.
ಕರಾವಳಿ ಜಿಲ್ಲೆಯ ಮೀನುಗಾರಿಕೆ ಅಭಿವೃದ್ಧಿಗೆ ಪೂರಕವಾದ ಮೀನುಗಾರಿಕೆ ಬಂದರು ಅಭಿವೃದ್ದಿ, ಕಡಲ್ಕೊರೆತ ತಡೆಗೆ ಶಾಶ್ವತ ಪರಿಹಾರ ಹಾಗೂ ಯುವಜನತೆಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಯಾವುದೇ ಯೋಜನೆ ರೂಪಿಸುವಲ್ಲಿ ವಿಫಲವಾಗಿದೆ. ನಾರಾಯಣ ಗುರು ಅಭಿವೃದ್ಧಿ ನಿಗಮಕ್ಕೆ ಅನುದಾನ ಹಾಗೂ ಬಂಟ ಸಮುದಾಯದ ಬೇಡಿಕೆಯಾಗಿದ್ದ ನಿಗಮದ ಸ್ಥಾಪನೆ ಬಗ್ಗೆ ಬಜೆಟ್ ನಲ್ಲಿ ಘೋಷಣೆ ಮಾಡಿಲ್ಲ. ಬಿಜೆಪಿ ಸರಕಾರದಲ್ಲಿ ಜಾರಿಯಾಗಿದ್ದ ರಾಷ್ಟೀಯ ಶಿಕ್ಷಣ ನೀತಿ ರದ್ದು, ಜಿಲ್ಲೆಗೊಂದು ಗೋಶಾಲೆ ಯೋಜನೆ, ಅಗ್ನಿವೀರ್ ತರಬೇತಿ ಯೋಜನೆ, ಮಹಿಳಾ ಸ್ವ ಸಹಾಯ ಸಂಘಗಳ ಸಹಾಯಧನ ಮೊದಲಾದ ಪ್ರಮುಖ ಯೋಜನೆಗಳನ್ನು ರದ್ದು ಮಾಡುವ ಮೂಲಕ ಸಿದ್ದರಾಮಯ್ಯರವರು ರಾಜ್ಯದ ಜನರಿಗೆ ನಿರಾಶಾದಾಯಕ ಬಜೆಟ್ ನೀಡಿದ್ದಾರೆ ಎಂದು ಯಶ್ಪಾಲ್ ಸುವರ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.