ಉಡುಪಿ, ಜು. 6: ಕರಾವಳಿ ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ನಿರ್ವಹಣೆಗೆ ತುರ್ತು ಕಾರ್ಯಾಚರಣೆ ಹಾಗೂ ಪ್ರವಾಹ ಪೀಡಿತ ಪ್ರದೇಶಗಳ ಸಂತ್ರಸ್ತರಿಗೆ ಸೂಕ್ತ ವ್ಯವಸ್ಥೆ ಮಾಡಲು ಸರ್ವ ಸನ್ನದ್ಧವಾಗಿರುವಂತೆ ಅಧಿಕಾರಿಗಳಿಗೆ ಶಾಸಕ ಯಶ್ಪಾಲ್ ಸುವರ್ಣ ಸೂಚನೆ ನೀಡಿದ್ದಾರೆ. ವಿಧಾನಸಭಾ ಅಧಿವೇಶನದಲ್ಲಿ ಉಡುಪಿ ಮೆಡಿಕಲ್ ಕಾಲೇಜು, ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಬಗ್ಗೆ ಸದನದಲ್ಲಿ ಚುಕ್ಕಿ ಪ್ರಶ್ನೆಗೆ ಸಮಯ ನಿಗದಿಯಾಗಿದ್ದು ಹಾಗೆ ನಾಳೆ ರಾಜ್ಯ ಬಜೆಟ್ ಮಂಡನೆ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿರುವ ಕಾರಣ ಜಿಲ್ಲಾಡಳಿತ ಹಾಗೂ ಉಡುಪಿ ಮತ್ತು ಬ್ರಹ್ಮಾವರ ತಹಶೀಲ್ದಾರ್ ಹಾಗೂ ಇಲಾಖೆಯ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿರುವುದಾಗಿ ತಿಳಿಸಿದ್ದಾರೆ.
ಈಗಾಗಲೇ ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಗರಸಭೆ, ಕಂದಾಯ ಇಲಾಖೆ, ಮೆಸ್ಕಾಂ, ಅರಣ್ಯ, ಗ್ರಾಮ ಪಂಚಾಯತ್, ಅಗ್ನಿಶಾಮಕದಳ, ಆರೋಗ್ಯ, ಮೀನುಗಾರಿಕೆ ಇಲಾಖೆ ಹಾಗೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ತಮ್ಮ ಕೇಂದ್ರ ಸ್ಥಾನದಲ್ಲಿದ್ದು ನಾಗರಿಕರಿಗೆ ತುರ್ತಾಗಿ ಸ್ಪಂದಿಸಲು ಶಾಸಕರು ತಿಳಿಸಿದ್ದಾರೆ. ಮೀನುಗಾರರು ತುರ್ತು ಪರಿಸ್ಥಿತಿಯಲ್ಲಿ ತಮ್ಮ ದೋಣಿಗಳನ್ನು ರಕ್ಷಣಾ ಕಾರ್ಯಾಚರಣೆಗೆ ಒದಗಿಸುವ ಮೂಲಕ ಜಿಲ್ಲಾಡಳಿತಕ್ಕೆ ಸಹಕಾರ ನೀಡುವಂತೆ ಮನವಿ ಮಾಡಿದ್ದು, ಪಕ್ಷದ ಕಾರ್ಯಕರ್ತರು, ಸ್ವಯಂಸೇವಕರು, ಯುವಕ ಸಂಘಗಳು ತಮ್ಮ ಪರಿಸರದಲ್ಲಿ ರಕ್ಷಣಾ ಕಾರ್ಯಾಚರಣೆಗೆ ಸಹಕಾರ ನೀಡುವಂತೆ ಪ್ರಕಟನೆಯ ಮೂಲಕ ಮನವಿ ಮಾಡಿದ್ದಾರೆ.