ಉಡುಪಿ, ಜುಲೈ 6: ಜಿಲ್ಲೆಯ ಗ್ರಾಮ ಪಂಚಾಯತ್‌ಗಳಲ್ಲಿ ವಿವಿಧ ಕಾರಣಗಳಿಂದ ಖಾಲಿ ಇರುವ/ ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗವು ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಅದರಂತೆ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಹಾರಾಡಿ ಗ್ರಾಮ ಪಂಚಾಯತ್- ಹಿಂದುಳಿದ ವರ್ಗ ಅ, ಕುಂದಾಪುರ ತಾಲೂಕಿನ ಹೆಮ್ಮಾಡಿ ಗ್ರಾಮ ಪಂಚಾಯತ್- ಸಾಮಾನ್ಯ ಮಹಿಳೆ ಹಾಗೂ ಕುಂಭಾಶಿ ಗ್ರಾಮ ಪಂಚಾಯತ್‌ನ ಅನುಸೂಚಿತ ಪಂಗಡ ಮಹಿಳೆ ತಲಾ 1 ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ ನಡೆಸಲು ಚುನಾವಣಾ ವೇಳಾಪಟ್ಟಿಯನ್ನು ನಿಗಧಿಪಡಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಕೂರ್ಮಾರಾವ್ ಎಂ ಆದೇಶಿಸಿರುತ್ತಾರೆ.
ನಾಮಪತ್ರ ಸಲ್ಲಿಕೆಗೆ ಜುಲೈ 12 ಕೊನೆಯ ದಿನವಾಗಿದೆ. ಜುಲೈ 13 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಜುಲೈ 15 ಕೊನೆಯ ದಿನ. ಜುಲೈ 23 ರಂದು ಬೆಳಗ್ಗೆ 7 ರಿಂದ ಸಂಜೆ 5 ರ ವರೆಗೆ ಮತದಾನ ನಡೆಯಲಿದ್ದು, ಜುಲೈ 26 ರಂದು ಬೆಳಗ್ಗೆ 8 ರಿಂದ ತಾಲೂಕು ಕೇಂದ್ರಗಳಲ್ಲಿ ಮತ ಎಣಿಕೆ ಕಾರ್ಯವು ನಡೆಯಲಿದೆ. ಚುನಾವಣೆ ನಡೆಯಲಿರುವ ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಯಲ್ಲಿ ಜುಲೈ 6 ರಿಂದ 26 ರ ವರೆಗೆ ಚುನಾವಣಾ ನೀತಿ ಸಂಹಿತೆಯು ಜಾರಿಯಲ್ಲಿರಲಿದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.