ನವದೆಹಲಿ, ಜುಲೈ 3: ಸಂಸತ್ತಿನ ಮುಂಗಾರು ಅಧಿವೇಶನವು ಜುಲೈ 20 ರಿಂದ ಪ್ರಾರಂಭವಾಗಲಿದ್ದು, ಆಗಸ್ಟ್ 11, 2023 ರಂದು ಮುಕ್ತಾಯಗೊಳ್ಳಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಂಸತ್ತಿನ ಅಧಿವೇಶನದಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರುವ ಸಾಧ್ಯತೆಗಳಿವೆ. ಧರ್ಮ, ಜಾತಿ, ಲಿಂಗ ದೃಷ್ಟಿಕೋನವನ್ನು ಲೆಕ್ಕಿಸದೆ ಭಾರತದ ಎಲ್ಲಾ ನಾಗರಿಕರಿಗೆ ಅನ್ವಯವಾಗುವ ವೈಯಕ್ತಿಕ ಕಾನೂನುಗಳನ್ನು ರೂಪಿಸುವುದು ಮತ್ತು ಕಾರ್ಯಗತಗೊಳಿಸುವುದನ್ನು ಏಕರೂಪ ನಾಗರಿಕ ಸಂಹಿತೆ ಒಳಗೊಂಡಿದೆ.
ಸುಪ್ರೀಂ ಕೋರ್ಟ್ ಕೂಡ ಏಕರೂಪ ನಾಗರಿಕ ಸಂಹಿತೆಯನ್ನು ಪ್ರತಿಪಾದಿಸಿದ್ದು ವೋಟ್ ಬ್ಯಾಂಕ್ ರಾಜಕೀಯ ಮಾಡುವವರು ಅದನ್ನು ವಿರೋಧಿಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಜೂನ್ 14 ರಂದು ಭಾರತದ ಕಾನೂನು ಆಯೋಗವು ಸಾರ್ವಜನಿಕರು ಮತ್ತು ಮಾನ್ಯತೆ ಪಡೆದ ಧಾರ್ಮಿಕ ಸಂಸ್ಥೆಗಳನ್ನು ಏಕರೂಪ ನಾಗರಿಕ ಸಂಹಿತೆ ಬಗ್ಗೆ ತಮ್ಮ ಅಭಿಪ್ರಾಯಗಳು ಮತ್ತು ಆಲೋಚನೆಗಳನ್ನು ನೀಡುವಂತೆ ಆಹ್ವಾನಿಸಿದನ್ನು ಇಲ್ಲಿ ಸ್ಮರಿಸಬಹುದು.