ಲೌಸನ್, (ಸ್ವಿಟ್ಜರ್ಲೆಂಡ್) ಜು. 1: ಒಲಿಂಪಿಕ್ ಚಾಂಪಿಯನ್ ನೀರಜ್ ಚೋಪ್ರಾ ಲೌಸನ್ ಡೈಮಂಡ್ ಲೀಗ್ ಸ್ಪರ್ಧೆಯಲ್ಲಿ 87.66 ಮೀಟರ್ ಎಸೆಯುವ ಮೂಲಕ ಚಿನ್ನದ ಪದಕ ಗೆದ್ದಿದ್ದಾರೆ. ಎರಡು ವರ್ಷಗಳಲ್ಲಿ ಎರಡನೇ ಬಾರಿಗೆ ಚೋಪ್ರಾ ಡೈಮಂಡ್ ಲೀಗ್ ನಲ್ಲಿ ಅಗ್ರ ಪ್ರಶಸ್ತಿಯನ್ನು ಗೆದ್ದಿದ್ದಾರೆ. 25 ವರ್ಷದ ಚೋಪ್ರಾ ಕಳೆದ ತಿಂಗಳು ತರಬೇತಿಯ ಸಮಯದಲ್ಲಿ ಸ್ನಾಯು ಸೆಳೆತದಿಂದಾಗಿ ಮೂರು ಪ್ರಮುಖ ಸ್ಪರ್ಧೆಗಳಿಂದ ಹೊರಗುಳಿದಿದ್ದರು, ಆದರೆ 87.66 ಮೀ ಐದನೇ ಸುತ್ತಿನ ಎಸೆತದೊಂದಿಗೆ ಡೈಮಂಡ್ ಲೀಗ್ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಭರ್ಜರಿಯಾಗಿ ಜಾವೆಲಿನ್ ರಂಗಪ್ರವೇಶ ಮಾಡಿದ್ದಾರೆ.
ಫೌಲ್ ನೊಂದಿಗೆ ಪ್ರಾರಂಭಿಸಿದ ನಂತರ, ಅವರು 83.52 ಮೀ ಮತ್ತು 85.04 ಮೀಟರ್ ಎಸೆದರು. ನಾಲ್ಕನೇ ಸುತ್ತಿನಲ್ಲಿ ಮತ್ತೊಂದು ಫೌಲ್. ನಂತರ ಚೋಪ್ರಾ ಭರ್ಜರಿಯಾಗಿ 87.66 ಮೀ ಎಸೆಯುವ ಮೂಲಕ ಚಿನ್ನದ ಪದಕದ ಆಸೆ ಜೀವಂತವಾಗಿಸಿದರು. ಅವರ ಆರನೇ ಮತ್ತು ಅಂತಿಮ ಎಸೆತವು 84.15 ಮೀ ಆಗಿತ್ತು. ಜರ್ಮನಿಯ ಜೂಲಿಯನ್ ವೆಬರ್ 87.03 ಮೀಟರ್ ಎಸೆಯುವ ಮೂಲಕ ಬೆಳ್ಳಿ ಪದಕ ಪಡೆದರೆ, ಜೆಕ್ ಗಣರಾಜ್ಯದ ಜಾಕುಬ್ ವಾಡ್ಲೆಜ್ಚ್ 86.13 ಮೀಟರ್ ಎಸೆತದೊಂದಿಗೆ ಕಂಚಿಗೆ ತೃಪ್ತಿಪಟ್ಟರು. ಲೌಸನ್ ಡೈಮಂಡ್ ಲೀಗ್ ಗೆಲುವು ಚೋಪ್ರಾ ಅವರ ಸತತ ಎರಡನೇ ಗೆಲುವಾಗಿದೆ. ಕಳೆದ ವರ್ಷ ಆಗಸ್ಟ್ ನಲ್ಲಿ ಪ್ರಶಸ್ತಿಯನ್ನು ಗೆದ್ದಿದ್ದರು. ತರುವಾಯ, ಅವರು ಒಂದು ತಿಂಗಳ ನಂತರ ಗ್ರ್ಯಾಂಡ್ ಫಿನಾಲೆಯಲ್ಲಿ ಡೈಮಂಡ್ ಲೀಗ್ ಟ್ರೋಫಿಯನ್ನು ಗೆದ್ದರು.
ಪ್ರಧಾನಿ ಅಭಿನಂದನೆ: ನೀರಜ್ ಚೋಪ್ರಾ ಅಭೂತಪೂರ್ವ ಸಾಧನೆಗಾಗಿ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ಅವರ ಪ್ರತಿಭೆ, ಸಮರ್ಪಣೆ, ಉತ್ಕೃಷ್ಟತೆಗಾಗಿ ಅವರು ನಡೆಸುವ ನಿರಂತರ ಪ್ರಯತ್ನ ಶ್ಲಾಘನೀಯ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.