ಬ್ರಹ್ಮಾವರ, ಜೂನ್ 29: ಕಾಲೇಜಿನ ವಿದ್ಯಾರ್ಥಿ ಸಂಘಗಳಲ್ಲಿ ವಿದ್ಯಾರ್ಥಿಗಳು ಕ್ರಿಯಾಶೀಲತೆಯಿಂದ ಭಾಗವಹಿಸಿದರೆ ಅವರಲ್ಲಿರುವ ಪ್ರತಿಭೆಗಳು ಅರಳಲು ಇಂತಹ ವೇದಿಕೆಗಳು ಪೂರಕ ವೇದಿಕೆಯಾಗಲಿದೆ ಎಂದು ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜಕಾರ್ಯ ಸಂಯೋಜಕರಾದ ಡಾ. ದುಗ್ಗಪ್ಪ ಕಜೆಕಾರ್ ಅಭಿಪ್ರಾಯಪಟ್ಟರು. ಅವರು ಬ್ರಹ್ಮಾವರದ ಎಸ್.ಎಂ.ಎಸ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಸಂಘದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡುತ್ತಿದ್ದರು. ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನದಲ್ಲಿ ವಿದ್ಯಾರ್ಥಿ ಸಂಘ ಪ್ರಮುಖ ಪಾತ್ರ ನಿರ್ವಹಿಸುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಸಂಚಾಲಕರಾದ ರೆ. ಫಾದರ್. ಎಂ ಸಿ. ಮಥಾಯ್ ವಹಿಸಿದ್ದರು. ಪ್ರಾಂಶುಪಾಲ ಐವರ್ ಡೊನತ್ ಸುವಾರಿಸ್ ಶುಭ ಹಾರೈಸಿದರು. ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ವತ್ಸಲ ಶೆಟ್ಟಿ ಪ್ರಮಾಣ ವಚನ ಬೋಧಿಸಿದರು. ಝೇಂಕಾರ್ ಎಂ.ಡಿ ಜೀವನ್ ಸಿ ಅಮೀನ್, ವಿದ್ಯಾರ್ಥಿ ಸಂಘದ ರಿಶೋನ್ ವರ್ಗೀಸ್ ಉಪಸ್ಥಿತರಿದ್ದರು. ವಿದ್ಯಾರ್ಥಿ ಸಂಘದ ಸಂಯೋಜಕ ವಿಜಯ ಆಳ್ವ ಸ್ವಾಗತಿಸಿ, ಗ್ರೇಸ್ ಮಿಲನ್ ಒಲಿವೆರಾ ವಂದಿಸಿದರು. ಪ್ರಸನ್ನ ಅಡಿಗ ಕಾರ್ಯಕ್ರಮ ನಿರೂಪಿಸಿದರು.