ಉಡುಪಿ, ಜೂ. 21: ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳನ್ನು ಸದಾ ಕ್ರಿಯಾಶೀಲವಾಗಿರಿಸುತ್ತವೆ. ಆಟ ಮತ್ತು ಪಾಠದೊಂದಿಗೆ ಊಟದ (ಆಹಾರ) ಕಡೆಗೂ ನಾವು ಗಮನ ಹರಿಸುವುದು ಅತ್ಯಗತ್ಯ. ಹಿರಿಯರಿಂದ ಬಳುವಳಿಯಾಗಿ ಬಂದಿರುವ ಆಹಾರ ಪದ್ಧತಿ, ಆಚಾರ, ವಿಚಾರ, ಸಂಸೃತಿಗಳನ್ನು ನಮ್ಮೊಳಗೆ ಅಳವಡಿಸಿಕೊಳ್ಳುವ ಮೂಲಕ ದೇಶದ ಸತ್ಪ್ರಜೆಗಳಾಗೋಣ ಎಂದು ಅದಮಾರು ಮಠದ ಪೀಠಾಧಿಪತಿಗಳಾದ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಹೇಳಿದರು. ಅವರು ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನಲ್ಲಿ ವಾರ್ಷಿಕೋತ್ಸವದ ಪ್ರಯುಕ್ತ ನಡೆದ ಬಹುಮಾನ ವಿತರಣಾ ಸಮಾರಂಭದಲ್ಲಿ ಉಪಸ್ಥಿತರಿದ್ದು, ಬಹುಮಾನ ವಿತರಿಸಿ, ಆಶೀರ್ವಚನ ನೀಡಿದರು.
ಮುಖ್ಯ ಅಭ್ಯಾಗತರಾದ, ಇನ್ನಂಜೆಯ ಎಸ್.ವಿ.ಹೆಚ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪುಂಡರೀಕಾಕ್ಷ ಕೊಡಂಚ ಅವರು, ಗಳಿಕೆಯೊಂದಿಗಿನ ಕಲಿಕೆಗೆ ಅವಕಾಶ ನೀಡಿ, ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಸಾಧನೆಗಳ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲದರಾದ ಡಾ. ಸುಕನ್ಯಾ ಮೇರಿ ಜೆ ಅವರು ವಹಿಸಿಕೊಂಡಿದ್ದರು.
ಕಾಲೇಜಿನ ಆಡಳಿತ ಮಂಡಳಿಯ ಗೌರವ ಕಾರ್ಯದರ್ಶಿಗಳಾದ ಸಿ.ಎ. ಟಿ. ಪ್ರಶಾಂತ್ ಹೊಳ್ಳ, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಗಳಾದ ಪ್ರೊ. ಚಂದ್ರಕಾಂತ್ ಭಟ್, ಲವಿಟಾ ಡಿಸೋಜಾ, ಉಪಪ್ರಾಂಶುಪಾಲರಾದ ವಿನಾಯಕ್ ಪೈ, ವಿದ್ಯಾರ್ಥಿ ಪ್ರತಿನಿಧಿಗಳಾದ ರಮೇಶ್ ಕಾಮತ್, ಕುಮಾರೇಶ್, ಸಿಂಧೂ, ನಮ್ರತಾ ಕುಂದರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಹನಾ ಸ್ವಾಗತಿಸಿ, ನಮ್ರತಾ ವಂದಿಸಿದರು. ದ್ವಿತೀಯ ಬಿ.ಎ ವಿದ್ಯಾರ್ಥಿನಿ ಸೌಜನ್ಯಾ ಕಾರ್ಯಕ್ರಮ ನಿರೂಪಿಸಿದರು.