ಉಡುಪಿ, ಜೂ.15: ಸತತ ಪರಿಶ್ರಮ ಇದ್ದಾಗ ಮಾತ್ರ ಗೆಲುವು ಸಾಧ್ಯ. ಪ್ರಸ್ತುತ ಜಗತ್ತಿನಲ್ಲಿ ಯಾವುದೇ ಕ್ಷೇತ್ರದಲ್ಲಾದರೂ ಅವಕಾಶಗಳು ಬಹಳಷ್ಟಿವೆ. ಅದನ್ನು ಸಾಧಿಸಲು ಛಲ ಹಾಗೂ ಪ್ರಯತ್ನ ಬೇಕು. ಶಿಕ್ಷಣ ಮಾತ್ರ ವಿದ್ಯಾರ್ಥಿಯ ಜೀವನವನ್ನು ಬೆಳಗಿಸುವಂತದ್ದು. ಜೊತೆಗೆ ಬದಲಾವಣೆಗಳಿಗೆ ಹೊಂದಿಕೊಂಡು ಸಮಸ್ಯೆಗಳನ್ನು ಹೇಗೆ ನಿಭಾಯಿಸುತ್ತೇವೆ ಅನ್ನುವುದು ನಿರ್ಣಾಯಕ. ದೈಹಿಕ ಹಾಗೂ ಮಾನಾಸಿಕವಾಗಿ ಅಭಿವೃದ್ಧಿ ಹೊಂದಿದಾಗ ಮಾತ್ರ ವಿದ್ಯಾರ್ಥಿಯು ಪ್ರಬುದ್ಧನಾಗಲು ಸಾಧ್ಯ ಎಂದು ತ್ರಿಶಾ ಸಂಸ್ಥೆಯ ಸಂಸ್ಥಾಪಕ ಸಿ. ಎ ಗೋಪಾಲಕೃಷ್ಣ ಭಟ್ ಹೇಳಿದರು. ತ್ರಿಶಾ ವಿದ್ಯಾ ಪಿಯು ಕಾಲೇಜಿನ ಪುನಶ್ಚೇತನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಅವರು ಮಾತನಾಡಿದರು.
ಎಸ್.ವಿ.ಎಸ್. ವಿದ್ಯಾವರ್ಧಕ ಸಂಘದ ಸಂಚಾಲಕರಾದ ಸತ್ಯೇಂದ್ರ ಪೈ ,ಆತನಾಡುತ್ತಾ, ತ್ರಿಶಾ ಕಾಲೇಜು ಕಟಪಾಡಿ ಗ್ರಾಮಕ್ಕೆ ಹೆಮ್ಮೆಯ ಸಂಗತಿ. ಕೇವಲ ಪಾಠಗಳಷ್ಟೇ ಅಲ್ಲದೆ, ಮೌಲ್ಯಾಧಾರಿತ ಶಿಕ್ಷಣವನ್ನು ನೀಡುತ್ತಿರುವುದು ಕಾಲೇಜಿನ ವಿಶೇಷವೇ ಸರಿ. ಗುಣಮಟ್ಟದ ಶಿಕ್ಷಣವನ್ನು ಒದಗಿಸುತ್ತಿರುವುದು ಶ್ಲಾಘನೀಯ ವಿಷಯ ಎಂದರು. ಕಾರ್ಯಕ್ರಮದಲ್ಲಿ ಸಿದ್ಧಾಂತ ಫೌಂಡೇಶನ್ ನ ಖಜಾಂಚಿಯಾದ ನಮಿತಾ ಜಿ. ಭಟ್ ಉಪಸ್ಥಿತರಿದ್ದರು.
ತ್ರಿಶಾ ವಿದ್ಯಾ ಪಿಯು ಕಾಲೇಜಿನ ಪ್ರಾಂಶುಪಾಲರಾದ ಡಾ. ಅನಂತ್ ಪೈ ಸ್ವಾಗತಿಸಿ, ವಿಜ್ಞಾನದಲ್ಲಿ ಪಿ.ಸಿ.ಎಂ.ಬಿ ಹಾಗೂ ಪಿ.ಸಿ.ಎಂ.ಸಿ ವಿಭಾಗದ ಮಹತ್ವದ ಜೊತೆಗೆ ಜೆ.ಇ.ಇ, ಎನ್.ಇ.ಇ.ಟಿ ತಯಾರಿಯ ಕುರಿತು ಮಾತನಾಡಿದರು. ಅಲ್ಲದೆ ವಾಣಿಜ್ಯ ವಿಭಾಗದಲ್ಲಿ ಬಿ.ಎ.ಎಂ.ಎಸ್. ಕೋರ್ಸ್ ನ ಮಹತ್ವ ಹಾಗೂ ಸಿ.ಎ, ಸಿ.ಎಸ್ ನ ತಯಾರಿಯ ಬಗ್ಗೆ ವಿವರಿಸಿದರು. ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಹೆತ್ತವರು ಭಾಗವಹಿಸಿದ್ದರು. ಪ್ರಾಧ್ಯಾಪಕ ಧೀರಜ್ ಬೆಳ್ಳಾರೆ ನಿರೂಪಿಸಿದರು. ಪ್ರಾಧ್ಯಾಪಕಿ ವರ್ಷ ವಂದಿಸಿದರು.