ಉಡುಪಿ, ಜೂನ್ 14: ದೇಶವನ್ನ ಆರ್ಥಿಕವಾಗಿ ಮತ್ತು ಎಲ್ಲಾ ರಂಗದಲ್ಲಿ ವಿಶ್ವದಲ್ಲೇ ಸದೃಢ ರಾಷ್ಟçವನ್ನಾಗಿರುವ ಜವಾಬ್ದಾರಿ ಇಂದಿನ ಯುವಜನರ ಮೇಲಿದೆ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು. ಅವರು ಬುಧವಾರ ನಗರದ ಪೂರ್ಣಪ್ರಜ್ಞ ಕಾಲೇಜಿನ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪೂರ್ಣಪ್ರಜ್ಞ ಕಾಲೇಜು, ನೆಹರು ಯುವ ಕೇಂದ್ರ ಉಡುಪಿ, ಡಾ. ಜಿ.ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಅಜ್ಜರಕಾಡು ಹಾಗೂ ಎನ್.ಎಸ್.ಎಸ್ ಮಂಗಳೂರು ವಿಶ್ವವಿದ್ಯಾನಿಲಯ ಇವರ ಸಹಯೋಗದೊಂದಿಗೆ ನಡೆದ ಜಿಲ್ಲಾಮಟ್ಟದ ಯುವ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದೇಶದಲ್ಲಿ ಯುವಶಕ್ತಿ ಹೆಚ್ಚಿನ ಸಂಖ್ಯೆಯಲ್ಲಿದ್ದು, ಇದರ ಸದ್ಬಳಕೆ ಆಗಬೇಕು, ಯುವಜನತೆ ಯಾವುದೇ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಿದರೂ ಸಹ ಆ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುವಂತಾಗಬೇಕು, ತಮ್ಮ ಅಭಿವೃಧ್ದಿಯ ಜೊತೆಗೆ ದೇಶದ ಅಭಿವೃಧ್ದಿಗೂ ಕೈ ಜೋಡಿಸಬೇಕು. ಮುಂದಿನ 25 ವರ್ಷಗಳಲ್ಲಿ ದೇಶದ ಸರ್ವತೋಮುಖ ಅಭಿವೃಧ್ದಿ ಯುವಜನರಿಂದ ಸಾಧ್ಯವಾಗಲಿದ್ದು, ವಿಶ್ವದಲ್ಲಿ ಎಲ್ಲಾ ರಂಗದಲ್ಲೂ ಭಾರತವನ್ನು ಮುಂಚೂಣಿಗೆ ತರುವ ತರುವ ಮಹತ್ತರ ಜವಾಬ್ದಾರಿ ಯುವ ಜನತೆಯದ್ದಾಗಿದೆ ಎಂದರು. ಶಾಸಕ ಯಶ್‌ಪಾಲ್ ಸುವರ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನೆಹರು ಯುವ ಕೇಂದ್ರದ ನಿರ್ದೇಶಕ ನಟರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾಪು ಶಾಸಕ ಗುರ್ಮೆ ಸುರೇಶ್ ಪಿ ಶೆಟ್ಟಿ, ಡಾ. ಜಿ.ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪ್ರಾಂಶುಪಾಲ ಡಾ.ಭಾಸ್ಕರ್ ಶೆಟ್ಟಿ, ಜಿಲ್ಲಾ ಯುವ ಅಧಿಕಾರಿ ಯಶ್ವಂತ್ ಯಾದವ್ ಮತ್ತಿತರರು ಉಪಸ್ಥಿತರಿದ್ದರು. ಪೂರ್ಣಪ್ರಜ್ಞ ಕಾಲೇಜಿನ ಪ್ರಾಂಶುಪಾಲ ಡಾ. ರಾಘವೇಂದ್ರ ಪ್ರತಿಜ್ಞಾ ವಿಧಿ ಬೋಧಿಸಿದರು. ಯುವ ಉತ್ಸವದಲ್ಲಿ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ, ಕವನ ಬರವಣಿಗೆ ಸ್ಪರ್ಧೆ, ನೃತ್ಯ ಸ್ಪರ್ಧೆ, ಭಾಷಣ ಸ್ಪರ್ಧೆ ಮತ್ತಿತರ ಸ್ಪರ್ಧೆಗಳು ನಡೆದವು.