Monday, November 25, 2024
Monday, November 25, 2024

ತಬಲಾಕ್ಕೆ ಒಬ್ಬಳೇ ರಾಜಕುಮಾರಿ- ರಿಂಪಾ ಶಿವಾ

ತಬಲಾಕ್ಕೆ ಒಬ್ಬಳೇ ರಾಜಕುಮಾರಿ- ರಿಂಪಾ ಶಿವಾ

Date:

ಕೆ ಕಲ್ಕತ್ತಾದ ಖ್ಯಾತ ತಬಲಾ ಕಲಾವಿದರಾದ ಪಂಡಿತ್ ಸ್ವಪನ್ ಶಿವ ಅವರ ಮಗಳು. ಮಗನ ನಿರೀಕ್ಷೆಯಲ್ಲಿದ್ದ ಅಪ್ಪನಿಗೆ ಮಗಳು ಹುಟ್ಟಿದ್ದು ಖುಷಿ ಕೊಡಲಿಲ್ಲ. ನನ್ನ ತಬಲಾ ಪರಂಪರೆಯನ್ನು ಅವಳು ಹೇಗಪ್ಪಾ ಮುಂದಕ್ಕೆ ತೆಗೊಂಡು ಹೋಗುವಳು ಅನ್ನೋದು ಅಪ್ಪನ ಚಿಂತೆ. ಆದರೆ ಆ ಹುಡುಗಿಯು ಸರಸ್ವತಿಯ ಪೂರ್ಣ ಅನುಗ್ರಹ ಪಡೆದು ಬಂದ ಹಾಗಿದ್ದಳು. ಮೂರನೇ ವರ್ಷಕ್ಕೆ ತಬಲಾ ಮುಂದೆ ಕೂತು ನುಡಿಸಲು ತೊಡಗಿದಳು. ಅವಳ ಓರಗೆಯ ಮಕ್ಕಳು ಗೊಂಬೆ ಹಿಡಿದು ಆಟವಾಡುವಾಗ ಅವಳಿಗೆ ತಬಲಾ ಜೊತೆ ಆಯ್ತು. ಅಪ್ಪನ ತಬಲಾ ಕ್ಲಾಸಿಗೆ ಬರುವ ಹುಡುಗರಿಗಿಂತ ವೇಗವಾಗಿ ಮತ್ತು ಸಶಕ್ತವಾಗಿ ಅವಳು ಅಪ್ಪನಿಗೆ ಪಾಠ ಒಪ್ಪಿಸುವುದನ್ನು ನೋಡಿದಾಗ ಅಪ್ಪನ ಅಭಿಪ್ರಾಯವು ಬದಲಾಯಿತು. ಅಪ್ಪ ತನ್ನ ಸರ್ವಸ್ವವನ್ನೂ ಆಕೆಗೆ ಧಾರೆ ಎರೆದರು. ಅವಳು ಈಗ ತಬ್ಲಾದಲ್ಲಿ ಅಂತಾರಾಷ್ಟ್ರೀಯ ಕಲಾವಿದೆ ಆಗಿ ರೂಪುಗೊಂಡಿದ್ಧಾರೆ.

ರಿಂಪಾ ಶಿವ ಈಗ ಜಾಗತಿಕ ಸಂಗೀತದ ಸ್ಟಾರ್: ಅಪ್ಪನಿಗೆ ಮಗಳು ಸಿತಾರ್ ಕಲಿತರೆ ಸಾಕು ಎಂಬ ಭಾವನೆ ಇತ್ತು. ಯಾಕೆಂದರೆ ಭಾರತದಲ್ಲಿ ಆಗ ಯಾರೂ ಪ್ರಸಿದ್ಧಿ ಪಡೆದ ಮಹಿಳಾ ತಬಲಾ ಪಟುಗಳು ಇರಲಿಲ್ಲ. ಆದರೆ ಆಕೆ ಹಠ ಹಿಡಿದು ಆರಿಸಿದ್ದು ಮತ್ತು ಒಲಿಸಿಕೊಡದ್ದು ತಬ್ಲವನ್ನು. ‘ತಬಲಾ ಮೇರಾ ಸಬ್ ಕುಚ್ ಹೈ’ ಎಂದು ಅವರು ಹೇಳಿದ್ದಾರೆ. ತಬಲಾ ಮತ್ತು ದಗ್ಗಾಗಳ ಮೇಲೆ ಅವರ ತನಿಬೆರಳುಗಳು ಹಿತವಾಗಿ ಸಂಚರಿಸುವಾಗ ಉಂಟು ಮಾಡುವ ತರಂಗಗಳ ನಾದ ಸುಖವನ್ನು ಕೇಳಿಯೇ ಆನಂದಿಸಬೇಕು.

ಎಂಟನೇ ವರ್ಷಕ್ಕೆ ಮೊದಲ ಸ್ಟೇಜ್ ಶೋ, ಹನ್ನೊಂದನೇ ವರ್ಷಕ್ಕೆ ಅಮೆರಿಕ, ಹಾಲೆಂಡ್, ಇಂಗ್ಲಾಂಡ್, ಫ್ರಾನ್ಸ್ ಹೀಗೆ ಸಾಗುತ್ತದೆ ಅವರ ಸಂಗೀತ ಯಾತ್ರೆ. ತಬ್ಲಾದ ತುಕುಡ, ಮುಕುಡ, ಟೇಕಾ, ರೇಲಾ, ಪೇಶ್ಕಾರ್, ಕಾಯ್ದಾ ಎಲ್ಲವೂ ಅವರಿಗೆ ಸುಲಲಿತ. ನಾಲ್ಕನೇ ಕಾಲದಲ್ಲೂ ಅವರು ಒಂದಿಷ್ಟೂ ಆಯಾಸ ಪಡದೇ ತೀನ್ ತಾಲ್, ಜಪ್ ತಾಲ, ರೂಪಕ್ ತಾಲ ನುಡಿಸುವುದನ್ನು ನೋಡುವಾಗ ಅಚ್ಚರಿ ಮೂಡುತ್ತದೆ.

‘ನೀನು ಸರಸ್ವತಿಯ ಪ್ರತಿರೂಪ’ ಎಂದರು ಉಸ್ತಾದ್ ಝಾಕೀರ್ ಹುಸೇನ್: ತಬಲಾ ಲೆಜೆಂಡ್ ಝಾಕಿರ್ ಹುಸೇನ್ ಅವರು ಒಮ್ಮೆ ಆಕೆಯ ಒಂದು ಆಡಿಯೋ ಕೇಳಿ ಶಾಕ್ ಆಗಿದ್ದರು. ಆಕೆಯ ವಯಸ್ಸು ಎಂಟು ವರ್ಷ ಅಂದಾಗ ಇನ್ನೂ ಬೆರಗಾದರು. ಆಕೆಯನ್ನು ಭೇಟಿ ಮಾಡಲು ಅವರು ಕಲ್ಕತ್ತಾದ ರಿಂಪಾ ಮನೆಗೆ ಬಂದರು. ಅಂದು ತಬಲಾ ಮಹಾ ಗುರುವಿನ ಮುಂದೆ ಪುಟ್ಟ ಹುಡುಗಿ ಮೈಮರೆತು ತಬಲಾ ನುಡಿಸಿದಳು. ಮುಗಿದ ನಂತರ ಅವಳ ಎಳೆಯ ಬೆರಳುಗಳನ್ನು ಕಣ್ಣಿಗೆ ಒತ್ತಿಕೊಂಡು ಝಾಕೀರ್ ಹುಸೇನ್ ಹೇಳಿದ್ದು ಒಂದೇ ಮಾತು. ‘ನೀನು ಸರಸ್ವತಿಯ ಪ್ರತಿರೂಪ’ ಎಂದು. ಅದು ಅವರ ಜೀವನದ ಅತ್ಯಂತ ರೋಮಾಂಚಕ ಘಟನೆ.

Rimpa Shiva – The Princess of Tabla: ಇನ್ನೊಂದು ಘಟನೆಯನ್ನು ನಾನು ಹೇಳಬೇಕು. ರಿಂಪಾ 12ನೆಯ ವರ್ಷದಲ್ಲಿ ಫ್ರಾನ್ಸನಲ್ಲಿ ಒಂದು ಶೋ ನೀಡಿದರು. ಅದು ಎಷ್ಟೊಂದು ಜನಪ್ರಿಯ ಆಯಿತೆಂದರೆ ಅವರ ಅಭಿಮಾನಿ ಬಳಗವೇ ಅಲ್ಲಿ ಸೃಷ್ಟಿಯಾಯಿತು. ಮುಂದೆ ಫ್ರಾನ್ಸ್ ಸರಕಾರ ತನ್ನದೇ ಟೀಮನ್ನು ಭಾರತಕ್ಕೆ ಕಳುಹಿಸಿಕೊಟ್ಟು ಅವರ ಮೇಲೆ 26 ನಿಮಿಷಗಳ ಒಂದು ಡಾಕ್ಯುಮೆಂಟರಿ ರೆಡಿ ಮಾಡಿಸಿತು. RIMPA SHIVA – The Princess Of Tabla ಶೀರ್ಷಿಕೆಯ ಆ ಡಾಕ್ಯುಮೆಂಟರಿ ಯುಟ್ಯೂಬನಲ್ಲಿ ಲಕ್ಷಾಂತರ ಜನರಿಂದ ವೀಕ್ಷಣೆ ಪಡೆದಿದೆ.

ಜಗದಗಲ ಹರಡಿದೆ ಕೀರ್ತಿ: ಈಗಾಗಲೇ ಹಾಲೆಂಡ್, ಫ್ರಾನ್ಸ್, ಜರ್ಮನಿ, ಟ್ಯೂನಿಷಿಯ, ದಕ್ಷಿಣ ಆಫ್ರಿಕಾ, ಅಮೆರಿಕ, ಇಂಗ್ಲಾಂಡ್ ದೇಶಗಳಲ್ಲಿ ಅವರು ತಬಲಾ ಶೋ ಮತ್ತು ತಬಲಾ ಸಾಥ್ ಎರಡನ್ನೂ ನೀಡಿದ್ದಾರೆ. ಕೀರ್ತಿವಂತ ಕಲಾವಿದರಾದ ಪಂಡಿತ್ ಜಸ್ರಾಜ್, ಅಜೋಯ್ ಚಕ್ರವರ್ತಿ, ಕೌಶಿಕೀ ಚಕ್ರವರ್ತಿ, ಹರಿಪ್ರಸಾದ್ ಚೌರಾಸಿಯಾ, ಆಲಿ ಅಕ್ಬರ್ ಖಾನ್, ಶಿವಕುಮಾರ್ ಶರ್ಮಾ ಮೊದಲಾದವರಿಗೆ ಅವರು ತಬಲಾ ಸಾಥ್ ನೀಡಿದ್ದಾರೆ. ಫ್ಯೂಷನ್ ಮತ್ತು ಶಾಸ್ತ್ರೀಯ ಎರಡೂ ಪ್ರಕಾರಗಳಿಗೆ ಅವರು ಹೊಂದಿಕೊಳ್ಳುತ್ತಾರೆ. ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರ ಅವರಿಗೆ ಅತೀ ಸಣ್ಣ ಪ್ರಾಯದಲ್ಲಿ ಸಂದಿದೆ.

ಆಕೆಗೆ ಅಪ್ಪನೇ ಪ್ರೇರಣೆ: ‘ತಬಲಾದಲ್ಲಿ ನನಗೆ ಅಪ್ಪನೇ ರೋಲ್ ಮಾಡೆಲ್. ತಬಲಾ ಧ್ವನಿಯೇ ನನಗೆ ಬಾಲ್ಯದಿಂದ ಪ್ರೇರಣೆ. ನಾನು ಈವರೆಗೆ ದೊಡ್ಡ ಸಾಧನೆ ಮಾಡಿದ್ದು ಏನೂ ಇಲ್ಲ. ಇನ್ನು ಬಹಳ ದೂರಕ್ಕೆ ಹೋಗುವುದು ಬಾಕಿ ಇದೆ’ ಎನ್ನುತ್ತಾರೆ ರಿಂಪಾ ಶಿವ. ಭಾರತದ ಎಲ್ಲ ನಗರಗಳಲ್ಲಿ, ಸಂಗೀತ ಉತ್ಸವಗಳಲ್ಲಿ ಆಕೆಯ ಸೋಲೋ ಪ್ರದರ್ಶನಗಳು ಈಗಾಗಲೇ ಜನಮನವನ್ನು ಗೆದ್ದಿವೆ. ಅವರಿಂದ ಸ್ಫೂರ್ತಿ ಪಡೆದು ಈಗ ಹೆಚ್ಚು ಹುಡುಗಿಯರು ತಬಲಾ ಕಡೆಗೆ ಬರುತ್ತಿರುವುದು ನಿಜಕ್ಕೂ ಆಶಾದಾಯಕ ಬೆಳವಣಿಗೆ.

ಭರತ ವಾಕ್ಯ: ಅಂದ ಹಾಗೆ ರಿಂಪಾ ಅವರಿಗೆ ಈಗ 37 ವರ್ಷ. ರಿಂಪಾ ಶಿವಾ ಭಾರತೀಯ ಸಂಗೀತದ ಜಾಗತಿಕ ರಾಯಭಾರಿ ಆಗಿ ಈಗಲೇ ರೂಪುಗೊಂಡಿದ್ದಾರೆ. ‘ತಬಲಾ ಮೇರಾ ಸಬ್ ಕುಚ್ ಹೈ ‘ಎನ್ನುವ, ದಿನಕ್ಕೆ ಕನಿಷ್ಠ 12 ಘಂಟೆ ಅವಧಿ ರಿಯಾಝ್ ಮಾಡುವ ರಿಂಪಾ ಶಿವಾ ಅವರಿಗೆ ಇನ್ನಷ್ಟು ಕೀರ್ತಿಯು ಒಲಿಯಲಿ.

-ರಾಜೇಂದ್ರ ಭಟ್ ಕೆ

 

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಪಂಚವರ್ಣ: 231ನೇ ಪರಿಸರಸ್ನೇಹಿ ಅಭಿಯಾನ

ಕೋಟ. ನ.25: ಪಂಚವರ್ಣ ಸಂಸ್ಥೆ ಪರಿಸರ ಜಾಗೃತಿ ಸ್ವಚ್ಛತಾ ಆಂದೋಲನ ಅವಿಭಜಿತ...

ಸಿಒಡಿಪಿ: ವಿಚಾರ ಸಂಕಿರಣ

ಮಂಗಳೂರು, ನ.25: ಮಾನವ ಕಳ್ಳಸಾಗಣೆ ಮತ್ತು ಸೈಬರ್ ಅಪರಾಧ ಕುರಿತ ವಿಚಾರ...

ಜನಾರ್ದ​ನ್ ಕೊಡವೂರು​ ದಂಪತಿಗಳಿಗೆ ಅಭಿನಂದನೆ ​

ಉಡುಪಿ, ನ.24: ಭಾರ​ತ್ ಸ್ಕೌಟ್ಸ್ ಅಂಡ್ ಗೈಡ್ಸ್ ​ಉಡುಪಿ ಸಂಸ್ಥೆಯ ಜಿಲ್ಲಾ​...

ಶಿಸ್ತು, ಛಲ, ಆತ್ಮಸ್ಥೈರ್ಯ ಬೆಳೆಸಿಕೊಳ್ಳಿ: ಉಡುಪಿ ಜಿಲ್ಲಾಧಿಕಾರಿ

ಉಡುಪಿ, ನ.24: ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ ಭಾಗವಹಿಸುವುದರಿಂದ ಜೀವನದಲ್ಲಿ ಶಿಸ್ತು,...
error: Content is protected !!