ಗಂಗೊಳ್ಳಿ, ಜೂನ್ 11: ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಅವರಿಗೆ ಅನುಕೂಲವಾಗುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಯಾವುದೇ ಸಂಸ್ಥೆಗೆ ಘನತೆಯನ್ನು ತಂದು ಕೊಡುತ್ತದೆ. ಪ್ರತಿ ಸಂಘ ಸಂಸ್ಥೆಗಳು ಈ ನಿಟ್ಟಿನಲ್ಲಿ ಪ್ರಯತ್ನಿಸಬೇಕು ಎಂದು ಸರಸ್ವತಿ ವಿದ್ಯಾಲಯ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ವಿಶ್ವನಾಥ ಭಟ್ ಅಭಿಪ್ರಾಯಪಟ್ಟರು. ಅವರು ಗಂಗೊಳ್ಳಿಯ ಬಿಲ್ಲವರ ಹಿತರಕ್ಷಣಾ ವೇದಿಕೆಯ ವತಿಯಿಂದ ನಡೆದ ಉಚಿತ ನೋಟ್ ಪುಸ್ತಕ ಮತ್ತು ಲೇಖನ ಸಾಮಗ್ರಿಗಳ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಬಿಲ್ಲವರ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಗೋಪಾಲ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಬಿಎಸ್ಎನ್ಎಲ್ ಇಂಜಿನಿಯರ್ ಅಣ್ಣಪ್ಪ ಬಿಲ್ಲವ, ಮತ್ಯೋದ್ಯಮಿಗಳಾದ ಲಕ್ಷ್ಮಣ ಬಿಲ್ಲವ ಮತ್ತು ದಿನೇಶ್ ಬಿಲ್ಲವ ಜೋಗಿಮನೆ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಒಟ್ಟು 160 ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕಗಳನ್ನು ವಿತರಿಸಲಾಯಿತು. ಅಕ್ಷತಾ ವಿನಯ್ ಪ್ರಾರ್ಥಿಸಿದರು. ಬಿಲ್ಲವರ ಹಿತರಕ್ಷಣ ವೇದಿಕೆ ಉಪಾಧ್ಯಕ್ಷ ಜಿ.ಕೆ ವೆಂಕಟೇಶ ಕೊಡೇರಿ ಮನೆ ಸ್ವಾಗತಿಸಿದರು. ಉಪನ್ಯಾಸಕ ನರೇಂದ್ರ ಎಸ್ ಗಂಗೊಳ್ಳಿ ಕಾರ್ಯಕ್ರಮ ನಿರೂಪಿಸಿದರು. ಗಣೇಶ್ ಪೂಜಾರಿ ವಂದಿಸಿದರು.