ವಿದ್ಯಾಗಿರಿ, ಜೂನ್ 10: ಕಲೆ ಹಾಗೂ ಸಂಸ್ಕ್ರತಿ ದೇಶದ ಬಹುದೊಡ್ಡ ಸಂಪತ್ತು. ಇದನ್ನು ಆಸ್ವಾದಿಸುವ ಮನಸ್ಥಿತಿ ಎಲ್ಲರಲ್ಲೂ ಇರಬೇಕು ಎಂದು ಅಂತರಾಷ್ಟ್ರೀಯ ಆಪ್ತ ಸಮಾಲೋಚಕ ಡಾ. ಥಾಮಸ್ ಸ್ಕರಿಯಾ ಹೇಳಿದರು. ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಕೇರಳ ಸಮಾಜಂ ವೇದಿಕೆ ಶನಿವಾರ ಆಯೋಜಿಸಿದ ಕಲೋತ್ಸವ 2023 ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂಸ್ಕ್ರತಿಯ ಆಚರಣೆ ನಮ್ಮ ಘನತೆಯನ್ನು ಎತ್ತಿ ಹಿಡಿಯುತ್ತದೆ. ಒಡನಾಟ, ಹಾಗೂ ನಡವಳಿಕೆಯಿಂದ ವ್ಯಕ್ತಿಯ ಸಂಸ್ಕಾರವನ್ನು ತಿಳಿಯಬಹುದಾಗಿದೆ. ಮನುಷ್ಯ ಸಂಘ ಜೀವಿ. ಅನಾವಶ್ಯಕ ಅಹಂಕಾರ ತೋರದೆ ಸೌಹಾರ್ದತೆಯಿಂದ ಬದುಕು ನಡೆಸಬೇಕು. ಇಂದು ಜಗತ್ತಿನ ಎಲ್ಲಾ ಕಡೆ ಮಲಯಾಳಂ ಸಮುದಾಯದವರಿದ್ದಾರೆ. ಅವರು ಎಲ್ಲೇ ಹೋದರು ತಮ್ಮ ಸಂಸ್ಕೃತಿಯನ್ನು ಸಾರುತ್ತಾರೆ. ಇತರರೊಂದಿಗೆ ಪ್ರೀತಿಯಿಂದ ಬೆರೆಯುತ್ತಾರೆ. ನಗು ಮತ್ತು ಸಹಾನುಭೂತಿಯಿಂದ ವ್ಯಕ್ತಿತ್ವಕ್ಕೆ ಬೆಲೆ ದುಪ್ಪಟ್ಟಾಗುತ್ತದೆ ಹಾಗಾಗಿ ಎಲ್ಲರೊಂದಿಗೆ ಸಂತಸದಿಂದ ಬೆರತು, ಜೀವನದ ಪ್ರತಿ ಕ್ಷಣವನ್ನು ಆನಂದಿಸಬೇಕು, ಅದೇ ನಿಜವಾದ ಕಲೆ ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ ಆಳ್ವ ಮಾತನಾಡಿ ಕೇರಳ ಹಲವು ಸಂಸ್ಕೃತಿಗಳನ್ನು ಬಿಂಬಿಸುವ ರಾಜ್ಯ. ಹಲವು ವಿಭಿನ್ನ ಕಲೆಗೆ ಹೆಸರುವಾಸಿಯಾಗಿದೆ. ಮಲಯಾಳಿಗಳು ತಮ್ಮ ಸಂಪ್ರದಾಯವನ್ನು ಇತರರಿಗೆ ತಿಳಿಸಿಕೊಡಲು ಸದಾ ಉತ್ಸುಕರಾಗಿರುತ್ತಾರೆ. ಅತಿಥಿ ಸತ್ಕಾರ, ಇತರರನ್ನು ಪ್ರೀತಿಯಿಂದ ಕಾಣುವ ಮನೋಭಾವ ಅವರ ಸಂಸ್ಕಾರದ ಕುರಿತು ಗೌರವ ಮೂಡಿಸುತ್ತದೆ ಎಂದರು.
ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್, ಆಳ್ವಾಸ್ ಕಾಲೇಜಿನ ಆಡಳಿತ ಅಧಿಕಾರಿ ಬಾಲಕೃಷ್ಣ ಶೆಟ್ಟಿ, ಆಳ್ವಾಸ್ ಹೊಮಿಯೋಪತಿ ಕಾಲೇಜಿನ ಪ್ರಾಂಶುಪಾಲ ಡಾ. ರೋಶನ್ ಪಿಂಟೋ, ಆಳ್ವಾಸ್ ಕಾಲೇಜಿನ ಮಲಯಾಳಂ ಪ್ರಾಧ್ಯಾಪಕ ಡಾ ನಾರಾಯಣ, ಸುಜಾತ, ಕೇರಳ ಸಮಾಜಂ ವೇದಿಕೆ ಸಂಯೋಜಕಿ ನಿಖಿತಾ ಹಾಗೂ ಸಂಯೋಜಕ ಶಬರಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ವಿದ್ಯಾರ್ಥಿ ಕೀರ್ತನಾ ಕೆ.ನಿರೂಪಿಸಿದರು. ಕಲೋತ್ಸವದ ಹಿನ್ನಲೆಯಲ್ಲಿ ಜರುಗಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಕಲೋತ್ಸವ ೨೦೨೩ ವತಿಯಿಂದ ಆಯೋಜಿಸಿದ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಸ್ಪರ್ಧೆಗೆ ಸಹಕಾರ ನೀಡಿದ ಆಳ್ವಾಸ್ ಪದವಿ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಮೋಹನ್ ಹಾಗೂ ದೈಹಿಕ ಶಿಕ್ಷಕ ತಿಲಕ್ ಕುಮಾರ್‌ರನ್ನು ಗೌರವಿಸಲಾಯಿತು.