ವಿದ್ಯಾಗಿರಿ (ಮೂಡುಬಿದಿರೆ), ಜೂನ್ 9: ಜೀರ್ಣೋದ್ಧಾರ ಹೆಸರಿನಲ್ಲಿ ನಾಗಬನಕ್ಕೆ ಹಾನಿ ಮಾಡಬೇಡಿ ಎಂದು ಉರಗ ತಜ್ಞ ಗುರುರಾಜ್ ಸನಿಲ್ ಮನವಿ ಮಾಡಿದರು. ಆಳ್ವಾಸ್ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ‘ಅಭಿವ್ಯಕ್ತಿ ವೇದಿಕೆ’ಯ ವತಿಯಿಂದ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಾಗಬನ ಹಾಗೂ ದೇವರ ಕಾಡುಗಳು ಅದ್ಭುತ ಪರಿಕಲ್ಪನೆಗಳು ಮಾತ್ರವಲ್ಲ, ಪರಿಸರ ಹಾಗೂ ನಮ್ಮನ್ನು ಉಳಿಸಿ-ಬೆಳೆಸುವ ಸ್ಥಾನಗಳು.
ನಾಗಬನಗಳು 150ರಷ್ಟು ಸಸ್ಯಪ್ರಭೇದ, ಹಲವಾರು ಪ್ರಾಣಿ, ಪಕ್ಷಿ ಪ್ರಭೇದ, ಪರಿಸರದ ಅಂತರ್ಜಲ, ತಾಪಮಾನ ನಿಯಂತ್ರಣ, ಆಮ್ಲಜನಕ ಸೇರಿದಂತೆ ಹಲವಾರು ಜೀವಪರ ಅಂಶಗಳನ್ನು ಹೊಂದಿವೆ. ಹೀಗಾಗಿ, ಇವುಗಳನ್ನು ಪೂರ್ವಜರು ಪ್ರಾಕೃತಿಕವಾಗಿಯೇ ಆರಾಧಿಸುತ್ತಿದ್ದರು. ಆದರೆ ಇಂದಿನ ಆಚರಣೆಗಳಿಂದ ಪರಿಸರ ಮಾತ್ರವಲ್ಲ, ನಾಗನೂ ನಾಶವಾಗಿ ಎಲ್ಲರಿಗೂ ಶಾಪ ತಟ್ಟುವಂತಾಗಿದೆ ಎಂದರು. ಬಾವಿಯ ಬಲೆಯಲ್ಲಿ ಬಿದ್ದ ನಾಗರಹಾವೊಂದನ್ನು ಒಬ್ಬರು ಬಲೆ ಸಮೇತ ನಾಗಬನದಲ್ಲಿ ಬಿಟ್ಟರು. ಆದರೆ, ಹಾವು ಒಂದೇ ದಿನದಲ್ಲಿ ಸತ್ತು ಹೋಯಿತು.
ಏಕೆಂದರೆ ಬನಕ್ಕೆ ಸಿಮೆಂಟ್ ಕಟ್ಟೆ, ಶೀಟ್ ಇತ್ಯಾದಿ ಹಾಕಿದ್ದರು. ನಾಗಬನ ನೈಜವಾಗಿದ್ದರೆ, ಹಾವು ಬದುಕುತ್ತಿತ್ತು ಎಂದು ನಿರ್ದಶನ ಸಹಿತ ವಿವರಿಸಿದರು. ಹಾವುಗಳ ಕುರಿತ ಅಜ್ಞಾನದಿಂದಾಗಿ ಮನುಷ್ಯ ಭಯ ಪಡುತ್ತಿರುವುದು ಮಾತ್ರವಲ್ಲ, ನಂಬಿಕೆ ಹೆಸರಿನಲ್ಲಿ ಅವುಗಳ ಬದುಕಿಗೂ ಹಾನಿ ಮಾಡುತ್ತಿದ್ದಾನೆ. ನಮ್ಮ ನಂಬಿಕೆ- ಆರಾಧನೆಗಳು ಪ್ರಕೃತಿ ಸಹಜವಾಗಿರಬೇಕು ಎಂದರು. ಹಾವುಗಳ ಕುರಿತು ಯಾರೋ ಹೇಳಿದ ಮಾಹಿತಿಯನ್ನು ನಂಬುತ್ತೇವೆ, ಆದರೆ ಪ್ರಶ್ನಿಸುವುದಿಲ್ಲ. ನಮ್ಮ ಹಿರಿಯರಿಗೆ ವಿದ್ಯೆಯಿಲ್ಲದಿದ್ದರೂ ಪ್ರಕೃತಿಯ ಕುರಿತು ಅಪಾರ ಕಾಳಜಿಯಿತ್ತು. ಹೀಗಾಗಿ ಪರಿಸರ, ಶುದ್ಧ ಗಾಳಿ, ಅಂತರ್ಜಲ ಉಳಿದಿತ್ತು. ಇಂದು ಮೂಢನಂಬಿಕೆಗಳಿಂದ ಜೀವಿಗಳಿಗೆ ಹಾನಿಯುಂಟು ಮಾಡುತ್ತಿದ್ದಾರೆ ಎಂದರು.
ಪ್ರಕೃತಿಯ ಆರೋಗ್ಯ ಪೂರ್ಣವಾಗಿರಬೇಕಾದರೆ ಪರಿಸರದಲ್ಲಿ 8 ರಿಂದ 11 ಪ್ರಭೇದದ ಹಾವುಗಳು ಇರಬೇಕು. ಆಹಾರ ಸರಪಳಿಯಲ್ಲಿ ವ್ಯತ್ಯಾಸವಾದರೆ, ಪ್ರಕೃತಿಗೆ ಹಾನಿಯಾಗುತ್ತದೆ ಎಂದರು. ಹಾವುಗಳು ಅತ್ಯಂತ ಸೂಕ್ಷ್ಮಜೀವಿಗಳು. ತಮಗೆ ತೊಂದರೆಯಾದಾಗ ಮಾತ್ರ ಕಚ್ಚುತ್ತವೆ. ಹಾವು ಕಚ್ಚಿದಾಗ ಭಯಪಡಬಾರದು. ಕಚ್ಚಿದ ಮೇಲ್ಭಾಗವನ್ನು ಬಟ್ಟೆಯಲ್ಲಿ ಸ್ಪಲ್ಪ ಗಟ್ಟಿಯಾಗಿ ಸುತ್ತಿ ಶೀಘ್ರವಾಗಿ ಆಸ್ಪತ್ರೆಗೆ ಕರೆದೊಯ್ಯಬೇಕು ಎಂದು ಸಲಹೆ ನೀಡಿದರು. ವಿಭಾಗದ ಪ್ರಾಧ್ಯಾಪಕ ಡಾ. ಶ್ರೀನಿವಾಸ ಹೊಡೆಯಾಲ, ಹರ್ಷವರ್ಧನ ಪಿ.ಆರ್., ದೀಕ್ಷಿತಾ, ಇಂಚರಾ ಗೌಡ ಇದ್ದರು. ವಿದ್ಯಾರ್ಥಿ ಅವಿನಾಶ್ ಕಟೀಲ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.