ಬ್ರಹ್ಮಾವರ, ಜೂನ್ 8: ಇಂದಿನ ದಿನ ವಿದ್ಯಾಭ್ಯಾಸಕ್ಕೂ ನಾವು ಕೈಗೊಳ್ಳವ ವೃತ್ತಿಗೆ ಸಂಬಂಧ ಬಹಳ ಕಡಿಮೆ ಇರುತ್ತದೆ. ಆರ್ಥಿಕ ಸ್ವಾವಲಂಬನೆ ಕಡೆಗೆ ನಾವು ಹೆಚ್ಚು ಒತ್ತು ಕೊಟ್ಟು ಬದ್ಧತೆಯಿಂದ ಸ್ವ ಉದ್ಯೋಗ ಕೈಗೊಳ್ಳಿ ಎಂದು ಕಾಡೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಹೇಶ್ ಕುಮಾರ್ ಹೇಳಿದರು.
ಬ್ರಹ್ಮಾವರ ರುಡ್ ಸೆಟ್ ಸಂಸ್ಥೆಯಲ್ಲಿ 10 ದಿನಗಳ ನಡೆಯುವ ಕೋಳಿ ಸಾಕಾಣಿಕೆ ತರಬೇತಿಯನ್ನು ದೀಪ ಬೆಳಗಿಸಿ ಉದ್ಘಾಟಿಸಿ, ಮಾತನಾಡಿದರು. ಗ್ರಾಮ ಪಂಚಾಯತ್ ನಲ್ಲಿ ಇರುವ ಸರಕಾರದ ನಿಯಮ ಹಾಗೂ ಬೇಕಾಗುವ ದಾಖಲೆಗಳ ಬಗ್ಗೆ, ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯಲ್ಲಿ ಸಿಗುವ ಸೌಲಭ್ಯಗಳ ವಿವರವನ್ನು ತಿಳಿಸಿ, ತರಬೇತಿಯ ಸದುಪಯೋಗ ಮಾಡಿಕೊಂಡು ಯಶಸ್ವಿಯಾಗಿ ಎಂದು ಶುಭ ಹಾರೈಸಿದರು.
ಅಧ್ಯಕ್ಷತೆಯನ್ನು ರುಡ್ ಸೆಟ್ ಸಂಸ್ಥೆಯ ನಿರ್ದೇಶಕರಾದ ಲಕ್ಷ್ಮೀಶ ಎ.ಜಿ ವಹಿಸಿ ಮಾತನಾಡಿ ತರಬೇತಿಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಎಂದು ತಿಳಿಸಿದರು. ಸಂಸ್ಥೆಯ ಹಿರಿಯ ಉಪನ್ಯಾಸಕರಾದ ಕೆ. ಕರುಣಾಕರ ಜೈನ್ ಸ್ವಾಗತಿಸಿ, ತರಬೇತಿಯ ಮುನ್ನೋಟವನ್ನು ನೀಡಿದರು. ಹಿರಿಯ ಕಛೇರಿ ಸಹಾಯಕರಾದ ಶ್ರೀನಿವಾಸಯ್ಯ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಶಿಬಿರಾರ್ಥಿ ಶೃತಿ ಪ್ರಾರ್ಥನೆ ನೆರವೇರಿಸಿದರು.