ಉಡುಪಿ, ಜೂನ್ 7: ರಾಜಸ್ಥಾನದ ಅಜ್ಮೀರ್ ಜಿಲ್ಲೆಯ ಪುಷ್ಕರ ಕ್ಷೇತ್ರಕ್ಕೆ ಆಗಮಿಸಿದ ಭಾವಿ ಪರ್ಯಾಯ ಪುತ್ತಿಗೆ ಶ್ರೀಪಾದರಾದ ಶ್ರೀ ಶ್ರೀ ಸುಗುಣೇಂದ್ರ ತೀರ್ಥರು ಹಾಗೂ ಅವರ ಶಿಷ್ಯ ಶ್ರೀ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರನ್ನು ಅಖಿಲ ಭಾರತೀಯ ಮಾಲಿ ಸೇವಾ ಸದನ ಸಂಸ್ಥಾನದ ವತಿಯಿಂದ ಅಧ್ಯಕ್ಷರಾದ ಓಂ ಪ್ರಕಾಶ್ ಸಂಖಾಲಾ ಬರಮಾಡಿಕೊಂಡು ಉಪಾಧ್ಯಕ್ಷ ರೂಪ್ ಚಂದ್ ಮರೋಹಿತ, ಅಜ್ಮೀರ್ ರಾಜ್ಯ ವಿಭಾಗದ ಕಾರ್ಯದರ್ಶಿ ಮುಖೇಶ್ ಕುಮಾರ್, ಅಜ್ಮೀರ್ ಜಿಲ್ಲೆಯ ಮುಜರಾಯಿ ಸಚಿವ ಅಗ್ನಿ ರಾವತ್, ಪಂಡಿತರಾದ ಸೃಷ್ಟಿ, ತಾರಾಚಂದ್, ಸತ್ಯನಾರಾಯಣ ಭಟ್ ಜೀ ಮುಂತಾದ ಗಣ್ಯರ ಸಮ್ಮುಖದಲ್ಲಿ ರಾಜಸ್ಥಾನೀಯ ಸಾಂಪ್ರದಾಯಿಕ ಶೈಲಿಯಲ್ಲಿ ಪೇಟ ತೊಡಿಸಿ, ಅಭಿನಂದನೆಯನ್ನು ಸಲ್ಲಿಸಲಾಯಿತು.
ಬ್ರಹ್ಮಸರೋವರ ಸ್ನಾನಗೈದ ಶ್ರೀಪಾದರು ಬ್ರಹ್ಮ ದೇವಾಲಯ ಹಾಗೂ ಶ್ರೀವೈಷ್ಣವ ಸಂಪ್ರದಾಯದ ವೇಣುಗೋಪಾಲದೇವರ ದರ್ಶನ ಪಡೆದರು. ಅಭಿನಂದನೆಯನ್ನು ಸ್ವೀಕರಿಸಿದ ಪುತ್ತಿಗೆ ಶ್ರೀಗಳು ವರಾಹ ದೇವರಿಂದ ಉದ್ಭವಿಸಿದ ಪುಷ್ಕರ ತೀರ್ಥ ಬ್ರಹ್ಮಸರೋವರದ ಮಹತ್ವವನ್ನು ತಿಳಿಸಿ, ಕೋಟಿ ಗೀತಾ ಲೇಖನ ಯಜ್ಞದ ದೀಕ್ಷೆಯನ್ನು ನೆರೆದ ಗಣ್ಯರಿಗೆಲ್ಲಾ ನೀಡಿದರು. ಪರ್ಯಾಯದ ಸಂದರ್ಭದಲ್ಲಿ ಉಡುಪಿಗೆ ಶ್ರೀಕೃಷ್ಣ ದರ್ಶನಕ್ಕೆ ಬರುವಂತೆ ಆಹ್ವಾನವಿತ್ತರು. ಅಲ್ಲಿನ ಭಕ್ತ ಜನತೆ ಪಂಡಿತ ಮಂಡಳಿ ಮುಂಬರುವ ನವೆಂಬರ್ ನಲ್ಲಿ ನಡೆಯುವ ಬೃಹತ್ ಕುಂಭಮೇಳಕ್ಕೆ ಪುತ್ತಿಗೆ ಶ್ರೀಪಾದದ್ವಯರಿಗೆ ಆದರದ ಆಮಂತ್ರಣವನ್ನಿತ್ತರು. ಶ್ರೀ ಪುತ್ತಿಗೆ ಮಠದ ಗೀತಾ ಪ್ರಚಾರಕರಾದ ಕೆ. ರಮೇಶ್ ಭಟ್ ಕಾರ್ಯಕ್ರಮವನ್ನು ನಿರ್ವಹಿಸಿದರು.