ಸಾಣೂರು, ಜೂನ್ 4: ಶೈಕ್ಷಣಿಕ ಚಟುವಟಿಕೆಗಳು ಬಹಳ ದೊಡ್ಡ ಪ್ರಮಾಣದಲ್ಲಿ ಪೈಪೋಟಿಯನ್ನು ತಲುಪುತ್ತಿವೆ. ಗ್ರಾಮೀಣ ಮಟ್ಟದಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಗುರುತಿಸಿದಾಗ ಪ್ರೇರಣೆ ದೊರೆಯುತ್ತದೆ ಅದರಲ್ಲಿಯೂ ಸರಕಾರಿ ಶಾಲೆಗಳಲ್ಲಿ ಸಾಧನೆ ಹೆಚ್ಚಾಗಲಿ ಎಂದು ಕಾರ್ಕಳ ಶಾಸಕ ವಿ ಸುನೀಲ್ ಕುಮಾರ್ ಅಭಿಪ್ರಾಯಪಟ್ಟರು. ಅವರು ರಾಜ್ಯ ಪ್ರಶಸ್ತಿ ಪುರಸ್ಕೃತ ಯುವಕ ಮಂಡಲ (ರಿ.) ಸಾಣೂರು ಇವರ ಆಶ್ರಯದಲ್ಲಿ ನಡೆದ 2022/23 ನೇ ಸಾಲಿನ ಎಸ್.ಎಸ್.ಎಲ್.ಸಿ ಮತ್ತು ದ್ವೀತಿಯ ಪಿಯುಸಿ ಪರೀಕ್ಷೆಯಲ್ಲಿ ಶೇಕಡ 90% ಕ್ಕಿಂತ ಅಧಿಕ ಅಂಕ ಪಡೆದ ಸಾಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮತ್ತು ಸರಕಾರಿ ಪದವಿಪೂರ್ವ ಕಾಲೇಜು ಹಾಗೂ ಸರಕಾರಿ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ನಡೆದ ಗೌರವ ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸಾಣೂರು ಯುವಕ ಮಂಡಲವು ಈ ವರ್ಷ ಕೈಗೆತ್ತಿಕೊಂಡಿರುವ ಆರೋಗ್ಯ ನಿಧಿ ಯೋಜನೆಯು ಯಶಸ್ವಿಯಾಗಲಿ ಎಂದರು.
ಸರಕಾರಿ ಪದವಿಪೂರ್ವ ಕಾಲೇಜು ಸಾಣೂರು ಇಲ್ಲಿನ ರಾಜ್ಯಶಾಸ್ತ್ರ ಉಪನ್ಯಾಸಕ ಜಗದೀಶ್ ನಾಯಕ್, ಪ್ರೌಢಶಾಲೆ ಮುಖ್ಯೋಪಾಧ್ಯಾಯ ಗಣೇಶ್ ಮೊಗವೀರ, ಯುವಕ ಮಂಡಲದ ಪ್ರಧಾನ ಮಹಾ ಪೋಷಕರಾದ ಗಿರೀಶ್ ಶೆಟ್ಟಿ, ದುರ್ಗಾ ಇಂದಿರಾನಗರ ಸಾಣೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪಿಯುಸಿ ವಿಭಾಗದಲ್ಲಿ 27 ವಿದ್ಯಾರ್ಥಿಗಳು ಮತ್ತು 11 ವಿದ್ಯಾರ್ಥಿಗಳು ಗೌರವ ಪಡೆದುಕೊಂಡರು. ಯುವಕ ಮಂಡಲದ ಅಧ್ಯಕ್ಷರಾದ ಪ್ರಸಾದ್ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಯುವಕ ಮಂಡಲದ ಉಪಾಧ್ಯಕ್ಷರಾದ ಪ್ರಸಾದ್ ಶೆಟ್ಟಿ ಸಾಧಕ ವಿದ್ಯಾರ್ಥಿಗಳ ಪರಿಚಯಗೈದರು. ಯುವಕ ಮಂಡಲದ ಕಾರ್ಯದರ್ಶಿ ಮೋಹನ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಯುವಕ ಮಂಡಲದ ಸಾಂಸ್ಕೃತಿಕ ಕಾರ್ಯದರ್ಶಿ ಚಂದ್ರಹಾಸ್ ಪೂಜಾರಿ ವಂದಿಸಿದರು. ಯುವಕ ಮಂಡಲದ ಪದಾಧಿಕಾರಿಗಳು, ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು.