ಸಿದ್ಧಾಪುರ, ಮೇ 19: ಸರಕಾರಿ ಪದವಿಪೂರ್ವ ಕಾಲೇಜು ಶಂಕರನಾರಾಯಣ ಪ್ರೌಢಶಾಲಾ ವಿಭಾಗದ 1990 ನೇ ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಪುನರ್‌ಮಿಲನ ಮತ್ತು ಗುರುವಂದನೆ ಕಾರ್ಯಕ್ರಮವು ಕಾಲೇಜಿನ ಶ್ರೀ ಸುಬ್ರಹ್ಮಣ್ಯ ಜೋಯಿಸ ಸುವರ್ಣ ಸಭಾಂಗಣದಲ್ಲಿ ನಡೆಯಿತು. ಸುಮಾರು 45 ಕ್ಕೂ ಅಧಿಕ ಹಳೆ ವಿದ್ಯಾರ್ಥಿಗಳು ತಮ್ಮ ಕುಟುಂಬ ಸಮೇತ ಪುನರ್ ಮಿಲನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.
ಅಂದಿನ ಪ್ರೌಢಶಾಲಾ ಶಿಕ್ಷಕರಾದ ಗೋಪಾಲ ಶೆಟ್ಟಿಗಾರ್, ವಾಸುದೇವ ಉಡುಪ ಮತ್ತು ಕಾಲೇಜು ವಿಭಾಗದ ಕರುಣಾಕರ ಶೆಟ್ಟಿ, ಶಿವಕುಮಾರ್ ಗಂಗೂರ್, ರಾಜಾರಾಮ್ ಪಾಟೀಲ್, ನಾಗೇಶ್ ಶಾನುಭೋಗ್ ಇವರುಗಳನ್ನು ಗೌರವಿಸಿ ಸನ್ಮಾನಿಸಲಾಯಿತು. 1990 ರ ಎಸ್.ಎಸ್.ಎಲ್.ಸಿ ಸಮಾನ ಮನಸ್ಕರು ಕಟ್ಟಿಕೊಂಡ ವಾಟ್ಸಪ್ ಬಳಗವು ಕಾರ್ಯಕ್ರಮ ಆಯೋಜನೆಯ ನೇತೃತ್ವ ವಹಿಸಿದ್ದರು. ಕಾರ್ಯಕ್ರಮದಲ್ಲಿ 1990 ಮೊದಲ ಮತ್ತು 1990 ರ ನಂತರ ಹಳೆ ವಿದ್ಯಾರ್ಥಿಗಳೂ ಭಾಗವಹಿಸಿದ್ದು ವಿಶೇಷವಾಗಿತ್ತು. ಮನೋರಂಜನಾ ಕಾರ್ಯಕ್ರಮದ ಅಂಗವಾಗಿ ಸಾಯಿಶ್ರುತಿ ಪಿಲಿಕಜೆ ಇವರಿಂದ ಮಾತನಾಡುವ ಗೊಂಬೆ ಕಾರ್ಯಕ್ರಮ ನಡೆಯಿತು.
ಬೇರೆ ಬೇರೆ ಜಿಲ್ಲೆ ಮತ್ತು ರಾಜ್ಯಗಳಲ್ಲಿ ಬದುಕನ್ನು ಕಟ್ಟಿಕೊಂಡಿದ್ದ ಹಳೆ ವಿದ್ಯಾರ್ಥಿಗಳು ಸುಮಾರು 33 ವರ್ಷಗಳ ನಂತರ ತಮ್ಮದೇ ಕಾಲೇಜಿನ ಪರಿಸರದಲ್ಲಿ ಮತ್ತೆ ಒಂದಾಗಿ ಹಳೆಯ ನೆನಪುಗಳನ್ನು ಹಂಚಿಕೊಂಡು ತಮ್ಮ ಪ್ರೀತಿಯ ಶಿಕ್ಷಕರಿಗೆ ಗುರುವಂದನೆ ನೀಡಿದ ಕಾರ್ಯಕ್ರಮ ಶಂಕರನಾರಾಯಣ ಇತಿಹಾಸದಲ್ಲಿ ಇದು ಪ್ರಥಮವಾಗಿತ್ತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು 1990 ರ ಎಸ್.ಎಸ್. ಎಲ್.ಸಿ ಸಮಾನ ಮನಸ್ಕರು ಕಟ್ಟಿಕೊಂಡ ವಾಟ್ಸಪ್ ಬಳಗದ ಎಡ್ಮಿನ್ ಗಳಲ್ಲಿ ಓರ್ವರೂ ವೃತ್ತಿಯಲ್ಲಿ ವಕೀಲರಾದ ಯೋಗೇಂದ್ರ ನಾಯ್ಕ ವಹಿಸಿದ್ದರು. ಇನ್ನೋರ್ವ ಎಡ್ಮಿನ್ ನಾಗರಾಜ ತಲ್ಲಂಜೆ ಮತ್ತು ಮಹಿಳಾ ಎಡ್ಮಿನ್ ಜಯಂತಿ ಐರೋಡಿ ಇವರು ಕಾರ್ಯಕ್ರಮವನ್ನು ನಿರೂಪಿಸಿದರು. ವಿಜಯಲಕ್ಷ್ಮೀ ಸೋಮಯಾಜಿ ಪ್ರಾರ್ಥಿಸಿ, ಚಂದ್ರಶೇಖರ ಹೆಗ್ಡೆ ಕಲ್ಗದ್ದೆ ಸ್ವಾಗತಿಸಿ, ಸುಭಾಷ್ ಚಂದ್ರ ರಾವ್ ವಂದಿಸಿದರು. ಗುರು ಶಿಷ್ಯ ಮತ್ತು ಕುಟುಂಬಸ್ಥರ ಸಹಭೋಜನ ಕಾರ್ಯಕ್ರಮ ಅತ್ಯಂತ ಭಾವನಾತ್ಮಕವಾಗಿತ್ತು.