ವಿದ್ಯಾಗಿರಿ, ಮೇ 16: ಮನಸ್ಸು ಆರೋಗ್ಯವಾಗಿದ್ದರೆ ಮಾತ್ರ ನಮ್ಮೆಲ್ಲ ಕನಸುಗಳನ್ನು ನನಸು ಮಾಡಲು ಸಾಧ್ಯ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಹೇಳಿದರು. ಆಳ್ವಾಸ್ ಕಾಲೇಜು ಆವರಣದಲ್ಲಿ ಆಳ್ವಾಸ್ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಹಮ್ಮಿಕೊಂಡ ‘ಮೂಲ ಸಮಾಲೋಚನಾ ಕೌಶಲ’ ಕುರಿತ ಎರಡು ದಿನಗಳ ರಾಷ್ಟ್ರಮಟ್ಟದ ಸಮ್ಮೇಳನ ‘ಮನಸ್ವಿ 2023’ ಅನ್ನು ಉದ್ಘಾಟಿಸಿ ಅವರು ಮಾತನಾಡಿದರು. ದೇಹವು ಸಪ್ತಧಾತುಗಳಿಂದ ಕೂಡಿದೆ. ಆದರೆ, ಅವುಗಳ ಎಲ್ಲದರ ನಿಯಂತ್ರಣ ಮನಸ್ಸಿನಲ್ಲಿದೆ. ಅದನ್ನು ಸಮಾಜದ ಹಿತಕ್ಕಾಗಿ ಬಳಸಬೇಕು ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್ ಮಾತನಾಡಿ, ಗ್ರಾಮೀಣ ಭಾಗದಲ್ಲಿರುವ ಮಾನಸಿಕ ಅಸ್ವಸ್ಥರಿಗೆ ಉತ್ತಮ ಚಿಕಿತ್ಸೆ ನೀಡಲು ಆಳ್ವಾಸ್ ಆಯುರ್ವೇದ ಆಸ್ಪತ್ರೆ ಜೊತೆ ಸೇರಿ ಕೆಲಸ ಮಾಡಲಾಗುವುದು ಎಂದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ, ಆಪ್ತ ಸಮಾಲೋಚಕಿ ದಿಶಾರಾಗ್ ಶೆಟ್ಟಿ, ಕಾಲೇಜಿನ ಪ್ರಾಂಶುಪಾಲ ಡಾ. ಸಜಿತ್ ಎಂ ಇದ್ದರು.
ಸಮ್ಮೇಳನದ ಮುಖ್ಯ ಸಂಘಟನಾ ಕಾರ್ಯದರ್ಶಿ ಡಾ. ಸ್ಮಿತಾ ಸ್ವಾಗತಿಸಿದರು. ಅತಿಥಿಗಳನ್ನು ಡಾ. ರವಿಪ್ರಸಾದ್ ಹೆಗ್ಡೆ ಮತ್ತು ಡಾ. ನಿಖಿಲ್ ಕುಮಾರಿ ಪರಿಚಯಿಸಿದರು. ಡಾ. ಗೀತಾ ಮಾರ್ಕೆಂಡೆ ಕಾರ್ಯಕ್ರಮ ಸಂಯೋಜಿಸಿದರು, ಡಾ. ವಿನಿತಾ ಡಿಸೋಜಾ ವಂದಿಸಿದರು.
ಸಮಾರೋಪ: ಉಡುಪಿಯ ಎಸ್‌ಡಿಎಂ ಆಯುರ್ವೇದ ಕಾಲೇಜು, ಬೆಳ್ತಂಗಡಿಯ ಪ್ರಸನ್ನ ಆಯುರ್ವೇದ ಕಾಲೇಜು, ಆಳ್ವಾಸ್ ಸಂಯೋಜಿತ ವಿಜ್ಞಾನ ವಿಭಾಗ, ಬೆಂಗಳೂರಿನ ಜೈನ್ ವಿಶ್ವವಿದ್ಯಾಲಯ, ಆಳ್ವಾಸ್ ಪ್ರಕೃತಿ ಚಿಕಿತ್ಸೆ ಹಾಗೂ ಯೋಗವಿಜ್ಞಾನ ಕಾಲೇಜು, ಶಿವಮೊಗ್ಗದ ರೋಟರಿ ಕಾಲೇಜು, ಆಳ್ವಾಸ್ ಆಯುರ್ವೇದ ಸ್ನಾತಕೋತ್ತರ ವಿಭಾಗ ಸೇರಿದಂತೆ ವಿವಿಧ ಸಂಸ್ಥೆಗಳನ್ನು ಪ್ರತಿನಿಧಿಸಿದ ಒಟ್ಟು 98 ಮಂದಿಗೆ ಮಂಗಳವಾರ ನಡೆದ ಸಮಾರೋಪ ಸಮಾರಂಭದಲ್ಲಿ ಪ್ರಮಾಣ ಪತ್ರ ನೀಡಲಾಯಿತು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿನಯ್ ಆಳ್ವ ಪ್ರಮಾಣ ಪತ್ರ ನೀಡಿದರು.