ಕೋಟ, ಮೇ 12: ಚಿಕ್ಕ ವಯಸ್ಸಿನಿಂದ ಮಕ್ಕಳು ಯಕ್ಷಗಾನ ಕಲಿಕೆಯ ಕುರಿತು ಆಸಕ್ತಿ ಮೂಡಿಸಿಕೊಂಡರೆ ಅವರಲ್ಲಿ ಜ್ಞಾನವೃದ್ಧಿ ಸಾಧ್ಯ. ಪಠ್ಯ ಕಲಿಕೆಯ ಜೊತೆಯಲ್ಲಿ ಮಕ್ಕಳ ಸೃಜನಾತ್ಮಕ ಬೆಳವಣಿಗೆಗೆ ಪೂರಕವಾಗುವ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಪೋಷಕರು ಪ್ರೋತ್ಸಾಹ ನೀಡಬೇಕು ಎಂದು ಸಾಂಸ್ಕೃತಿಕ ಚಿಂತಕ ಹೆಚ್. ವೆಂಕಟೇಶ್ ಶ್ಯಾನುಭೋಗ್ ಹೇಳಿದರು. ಅವರು ಡಾ. ಶಿವರಾಮ ಕಾರಂತ ಪ್ರತಿಷ್ಠಾನ (ರಿ.) ಕೋಟ, ಡಾ. ಶಿವರಾಮ ಕಾರಂತ ಟ್ರಸ್ಟ್ (ರಿ.) ಉಡುಪಿ, ಕೋಟತಟ್ಟು ಗ್ರಾಮ ಪಂಚಾಯತ್ ಆಶ್ರಯದಲ್ಲಿ ಕೋಟದ ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್ ನಲ್ಲಿ ನಡೆಯುತ್ತಿರುವ ರಂಗು ರಂಗಿನ ಯಕ್ಷಗಾನ ಬೇಸಿಗೆ ಶಿಬಿರ ಬಾಲವನ (ಬಣ್ಣದ ಓಕುಳಿ) ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.
ವೇದಿಕೆಯಲ್ಲಿ ಕಾರಂತ ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ, ಟ್ರಸ್ಟಿ ಸುಬ್ರಾಯ ಆಚಾರ್ಯ, ಸತೀಶ್ ವಡ್ಡರ್ಸೆ, ಶಿಬಿರದ ತರಬೇತುದಾರರಾದ ಸಂಗೀತ ಕಾರ್ತಟ್ಟು, ಗಣೇಶ್ ಕಾರ್ಕಡ, ಸ್ವಸ್ತಿಕ್ ವಡ್ಡರ್ಸೆ ಉಪಸ್ಥಿತರಿದ್ದರು.