ತೆಂಕನಿಡಿಯೂರು, ಮೇ 9: ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಇಲ್ಲಿನ ಯೂತ್ ರೆಡ್‌ಕ್ರಾಸ್ ಘಟಕದ ಆಶ್ರಯದಲ್ಲಿ ರೆಡ್‌ಕ್ರಾಸ್ ದಿನಾಚರಣೆ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಡಾ. ರಘು ನಾಯ್ಕ ರೆಡ್‌ಕ್ರಾಸ್ ಸ್ವಯಂ ಸೇವಕರನ್ನು ಉದ್ದೇಶಿಸಿ ಮಾತನಾಡಿದರು. ಓರ್ವ ವ್ಯಕ್ತಿ ಇನ್ನೊಂದು ಜೀವದ ಮಹತ್ವ ಅರಿಯುವಂತಾಗುವಲ್ಲಿ ರೆಡ್‌ಕ್ರಾಸ್‌ನಂತಹ ಸಂಸ್ಥೆಗಳ ಪಾತ್ರ ಸಾಕಷ್ಟಿದೆ. ಇದರಲ್ಲಿ ವಿದ್ಯಾರ್ಥಿಗಳು ಸಾಕಷ್ಟು ತೊಡಗಿಸಿಕೊಂಡಲ್ಲಿ ನಮ್ಮ ಸಮಾಜ ಇನ್ನಷ್ಟು ಗಟ್ಟಿಗೊಳ್ಳಲು ಸಾಧ್ಯ ಎಂದರು.
ಸಭಾಧ್ಯಕ್ಷತೆ ವಹಿಸಿದ ಪ್ರಾಂಶುಪಾಲರಾದ ಪ್ರೊ. ಸುರೇಶ್ ರೈ ಕೆ., ರೆಡ್‌ಕ್ರಾಸ್‌ನ ಉಗಮದ ಚಿತ್ರಣವನ್ನು ನೀಡಿದರು. ಐಕ್ಯೂಎಸಿ ಸಂಚಾಲಕರಾದ ಡಾ. ಮೇವಿ ಮಿರಾಂದ, ಗ್ರಂಥಪಾಲಕರಾದ ಕೃಷ್ಣ ಉಪಸ್ಥಿತರಿದ್ದರು. ಯೂತ್ ರೆಡ್‌ಕ್ರಾಸ್ ಸಂಚಾಲಕ ರಾಜಕೀಯಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರಶಾಂತ ಎನ್ ಸ್ವಾಗತಿಸಿ, ರಾಜಕೀಯಶಾಸ್ತ್ರ ಉಪನ್ಯಾಸಕರಾದ ಪಾಂಡುರಂಗ ಕಾರ್ಯಕ್ರಮ ನಿರೂಪಿಸಿದರು. ರೆಡ್‌ಕ್ರಾಸ್ ಸಂಸ್ಥಾಪಕರಾದ ಹೆನ್ರಿ ಡುನಾಂಟ್ ಭಾವಚಿತ್ರಕ್ಕೆ ಮಾಲಾರ್ಪಣೆಗೈದು ಸ್ಮರಿಸಲಾಯಿತು.