ಉಡುಪಿ, ಮೇ 8: ಕುಕ್ಕಿಕಟ್ಟೆಯ ಶ್ರೀ ಕೃಷ್ಣ ಬಾಲನಿಕೇತನದಲ್ಲಿ ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯಿತು. ಅಧ್ಯಕ್ಷತೆ ವಹಿಸಿ ಮಾತನಾಡಿದ ಪೇಜಾವರ ಮಠದ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ಭಗವಂತ ಗುಡಿಯಲ್ಲಿ ಮಾತ್ರವಲ್ಲ, ಎಲ್ಲರ ಹೃದಯದಲ್ಲಿಯೂ ನೆಲೆಸಿದ್ದು ಅವಕಾಶ ವಂಚಿತ ಮಕ್ಕಳ ಸೇವೆಯು ದೇವರ ಪೂಜೆಯಾಗಿದೆ. ಶ್ರೀ ಕೃಷ್ಣ ಬಾಲನಿಕೇತನವು ಕಳೆದ ಮೂವತ್ತಮೂರು ವರ್ಷಗಳಲ್ಲಿ ಸಮಾಜದ ಎಲ್ಲರ ಸಹಕಾರದಿಂದ ಅನೇಕ ಮಕ್ಕಳ ಬಾಳಿಗೆ ಬೆಳಕಾಗಿರುವುದು ಸ್ತುತ್ಯಾರ್ಹ ಎಂದರು.
ಸಂಸ್ಥೆಯ ಉಪಾಧ್ಯಕ್ಷ ಪ್ರೊ. ಕಮಲಾಕ್ಷ ಸ್ವಾಗತಿಸಿ, ಕಾರ್ಯದರ್ಶಿ ರಾಮಚಂದ್ರ ಉಪಾಧ್ಯಾಯ ವಾರ್ಷಿಕ ವರದಿ ಮಂಡಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಈ ವರ್ಷದ ಬಾಲವಾತ್ಸಲ್ಯ ಸಿಂಧು ಪ್ರಶಸ್ತಿಯನ್ನು ಕುಂದಾಪುರದ ಕೋಣಿಯ ಮಾನಸ ವಿಶೇಷ ಮಕ್ಕಳ ಶಾಲೆಯನ್ನು ನೆದರ್ಲ್ಯಾಂಡಿನ ಮಾರ್ಜ್ ವಾನ್ ಡೆನ್ ಬ್ರಾಂಡ್ ರೊಡನೆ ಸೇವಾಭಾವದಿಂದ ವಿಕಲಚೇತನ ಮಕ್ಕಳ ಸೇವಾ ಸಂಸ್ಥೆ ‘ಮಾನಸ ಜ್ಯೋತಿ’ಯನ್ನು ಸೇರಿಕೊಂಡು ಅದನ್ನು ಒಂದು ಪರಿಪೂರ್ಣ ವಿಶೇಷ ಮಕ್ಕಳ ಅಭಿವೃದ್ಧಿ ಸಂಸ್ಥೆಯಾಗಿ ಮಾಡುವಲ್ಲಿ ಶ್ರಮಿಸಿದ ಶೋಭಾ ಮಧ್ಯಸ್ಥರಿಗೆ ನೀಡಲಾಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಉಡುಪಿ ಜಿಲ್ಲಾ ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರಾದ ರವೀಂದ್ರ ಅರಿ ಶುಭ ಹಾರೈಸಿದರು. ಕರ್ನಾಟಕ ಬ್ಯಾಂಕ್ ನ ನಿರ್ದೇಶಕ ಮತ್ತು ಪಂಜಾಬ್ ನ್ಯಾಶನಲ್ ಬ್ಯಾಂಕ್ ನ ನಿವೃತ್ತ ಕಾರ್ಯನಿರ್ವಾಹಕ ನಿರ್ದೇಶಕ ಬಾಲಕೃಷ್ಣ ಅಲ್ಸೆ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ನಡೆಸುತ್ತಿರುವ ಈ ಸಂಸ್ಥೆಯ ಕಾರ್ಯಕ್ರಮಗಳನ್ನು ಕೊಂಡಾಡಿ ತಮ್ಮ ಮತ್ತು ಸಂಸ್ಥೆಯ ಸಂಬಂಧಗಳು ಮುಂದುವರಿಯಲೆಂದು ಆಶಿಸಿದರು.
ಮೈಸೂರು ಮರ್ಕಂಟೈಲ್ ಕಂಪನಿಯ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಹೆಗ್ಗುಂಜೆ ರಾಜೀವ ಶೆಟ್ಟಿ ಚ್ಯಾರಿಟೇಬಲ್ ಸೊಸೈಟಿಯ ಅಧ್ಯಕ್ಷ ಎಚ್ ಎಸ್ ಶೆಟ್ಟಿ ತಮ್ಮ ಜೀವನಾನುಭವವನ್ನು ಹಂಚಿಕೊಂಡು ಮಕ್ಕಳಿಗೆ ಕಿವಿಮಾತು ಹೇಳಿದ್ದಲ್ಲದೆ ಸಂಸ್ಥೆಗೆ ದೇಣಿಗೆ ನೀಡಿ ಶುಭ ಹಾರೈಸಿದರು. ಆಡಳಿತ ಮಂಡಳಿ ಸದಸ್ಯ ರಾಘವೇಂದ್ರ ರಾಯರು ವಂದಿಸಿದರು. ಗುರುರಾಜ ಭಟ್ ಕಾರ್ಯಕ್ರಮ ನಿರೂಪಿಸಿದರು. ಹೇಮಂತ ಶೆಟ್ಟಿಗಾರ್ ನೇತೃತ್ವದಲ್ಲಿ ಮಕ್ಕಳಿಂದ ಜಾನಪದ ನೃತ್ಯ ಪ್ರದರ್ಶನ ನಡೆಯಿತು.